ಕೈ ಕೊಟ್ಟ ಸುಮಲತಾ, ಕಂಗೆಟ್ಟ ಜೆಡಿಎಸ್

Sumalatha
Published on

ಬೆಂಗಳೂರು: ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯದ ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಬಿಜೆಪಿ ಬೆಂಬಲಿಸಿ ಕ್ಷೇತ್ರವನ್ನೇ ಬಿಟ್ಟುಕೊಟ್ಟ ಹಾಲಿ ಸಂಸದೆ ಸುಮಲತಾ ಅಂಬರೀಶ್ ಕೊನೆಗೂ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಪ್ರಚಾರಕ್ಕೆ ತೆರಳಲೇ ಇಲ್ಲ.

ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಸುಮಲತಾ ಮಂಡ್ಯದಲ್ಲಿ ಪ್ರಚಾರ ಮಾಡುವ ವೇಳಾಪಟ್ಟಿ ಸಿದ್ಧಗೊಂಡಿತ್ತು. ಆದರೆ, ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಸುಮಲತಾ ಪ್ರಚಾರಕ್ಕೆ ತೆರಳಲಿಲ್ಲ. ಇದರಿಂದ ಜೆಡಿಎಸ್ ಕಂಗೆಟ್ಟಿದೆ. ಅಲ್ಲದೆ, ಸುಮಲತಾ ಪರವಾಗಿ ಕಳೆದ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ ನಟ ದರ್ಶನ್ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ್ದಾರೆ.

ಆದರೆ ಹಾಲಿ ಸಂಸದರಾಗಿರುವ ಸುಮಲತಾ ಮೈತ್ರಿ ಅಭ್ಯರ್ಥಿ ಪ್ರಚಾರದಿಂದ ದೂರ ಉಳಿದದ್ದನ್ನು ಜೀರ್ಣಿಸಿಕೊಳ್ಳುವುದು ಜೆಡಿಎಸ್‌ಗೆ ಕಷ್ಟವಾಗಿದೆ.

ಇನ್ನೊಂದು ಮೂಲಗಳ ಪ್ರಕಾರ ಬಿಜೆಪಿ ಹೈಕಮಾಂಡ್ ಸೂಚನೆಯಂತೆಯೇ ಸುಮಲತಾ ಮಂಡ್ಯ ಪ್ರಚಾರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಮಲತಾ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರೆ ನಟ ದಿ.ಅಂಬರೀಶ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಬಹುದು. ಇದು ಮೈತ್ರಿ ಅಭ್ಯರ್ಥಿ ಗೆಲುವಿಗೆ ಅಡ್ವರ್ಸ್ ಎೆಕ್ಟ್ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ಸುಮಲತಾ ಪ್ರಚಾರಕ್ಕೆ ಬಿಜೆಪಿಯೇ ತಡೆ ಒಡ್ಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಸುಮಲತಾ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿಯದೆ ಕೈಕೊಟ್ಟದ್ದು ಜೆಡಿಎಸ್ ನಾಗಾಲೋಟಕ್ಕೆ ಸಣ್ಣ ಬ್ರೇಕ್ ಹಾಕಿದಂತಾಗಿದೆ.

ದೇವೇಗೌಡ ತೀವ್ರ ಅಸಮಾಧಾನ:

ಹಾಸನದಲ್ಲಿ ಬಿಜೆಪಿ ಕೆಲವರ ಸಹಾರ ಸಿಕ್ಕಿಲ್ಲ. ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಸನದಲ್ಲಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net