

ನವದೆಹಲಿ: ವಿದ್ವಂಸಕ ಕೃತ್ಯ ನಡೆಸಲು ಶೇಖರಿಸಲಾಗಿದ್ದ ಹಲವು ಸ್ಫೋಟಕ ಸಾಧನಗಳು, ಸ್ಫೋಟಕಗಳಿರುವ ನಡುಪಟ್ಟಿ, ಜಾಕೆಟ್ಅನ್ನು ಉತ್ತರಪ್ರದೇಶ ಬಲರಾಮ್ಪುರದ ಉಗ್ರ ಮಹಮ್ಮದ್ ಮುಷ್ತಕೀಮ್ ಮನೆಯಿಂದ ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ದೆಹಲಿಯ ಕರೊಲ್ ಬಾಗ್ ಪ್ರದೇಶದದಲ್ಲಿ ಗುಂಡಿನ ಚಕಮಕಿ ನಡೆಸಿ ಈತನನ್ನು ಪೊಲೀಸರು ಬಂಧಿಸಿದ್ದರು. ಮನೆಯಲ್ಲಿ ಐಸಿಸ್ ಧ್ವಜಗಳು, ಉಗ್ರ ಸಂಘಟನೆಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದಲ್ಲದೇ, ಸ್ಫೋಟಕವಾಗಿ ಬಳಸಲು ಇಟ್ಟಿದ್ದ ಎರಡು ಪ್ರೆಷರ್ ಕುಕರ್, 15 ಕೆಜಿಗಳಷ್ಟು ಸ್ಫೋಟಕ, ಪಿಸ್ತೂಲ್, ನಾಲ್ಕು ಗುಂಡುಗಳನ್ನು ಈತನಿಂದ ದೆಹಲಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದಾಗುತ್ತಿದ್ದಂತೆ, ಪೊಲೀಸರು ಈತನ ಬಲರಾಮ್ಪುರದಲ್ಲಿದ್ದ ಮನೆಗೆ ಧಾವಿಸಿದ್ದರು. ಗ್ರಾಮಕ್ಕೆಲ್ಲ ದಿಗ್ಬಂಧನ ವಿಧಿಸಿ ಸಂಪೂರ್ಣ ತಪಾಸಣೆ ನಡೆಸಿದ್ದರು.
ಆತ್ಮಹತ್ಯಾ ದಾಳಿಗೆ ಬಳಸಲಾಗುವ ಸ್ಫೋಟಕವಿರಿಸುವ ಏಳು ಪಾಕೆಟ್ಗಳಿರುವ ಎರಡು ಜಾಕೆಟ್ಗಳು, ಮೂರು ಕೆಜಿ ಸ್ಫೋಟಕ ತುಂಬಿದ್ದ ನಡುಪಟ್ಟಿಗಳು ಪತ್ತೆಯಾಗಿದ್ದವು. ತಜ್ಞರು ಇದರಲ್ಲಿದ್ದ ಬಾಂಬ್ಗಳನ್ನು ಸುರಕ್ಷಿತವಾಗಿ ಹೊರ ತೆಗೆದು ನಿಷ್ಕ್ರಿಯಗೊಳಿಸಲಾಗಿದೆ. ಒಟ್ಟಾರೆ 9 ಕೆಜಿ ಸ್ಫೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ವೈರ್ಗಳು, ಅಂಟುಪಟ್ಟಿಗಳು, ಸಿಲಿಂಡರ್ ಆಕಾರಾದ ವಸ್ತುಗಳು. ಲಿಥಿಯಂ ಬ್ಯಾಟರಿಗಳು, ಬಾಲ್ ಬೇರಿಂಗ್ ಸೇರಿ ಬಾಂಬ್ ತಯಾರಿಸಲು ಬೇಕಿದ್ದ ವಸ್ತುಗಳನ್ನೆಲ್ಲ ಮುಷ್ತಕೀಮ್ ಇಲ್ಲಿಟ್ಟಿದ್ದ.
ಒಂದು ವೇಳೆ ಆಗಸ್ಟ್ 15ರಂದು ವಿಧ್ವಂಸಕ ಕೃತ್ಯ ಎಸಗುವ ಈತನ ಉದ್ದೇಶ ಈಡೇರಿದ್ದೇ ಆದಲ್ಲಿ ಭಾರಿ ಪ್ರಮಾಣದ ಸಾವು-ನೋವು ಸಂಭವಿಸುತ್ತಿತ್ತು. ಏಕೆಂದರೆ ಈತ ಬಳಿ ಸಿಕ್ಕ ಕುಕರ್ ಬಾಂಬ್ಗಳು ಸಂಫೂರ್ಣ ಸಜ್ಜಾಗಿದ್ದು, ಅವನ್ನು ಆ್ಯಕ್ಟಿವೇಟ್ ಮಾಡುವುದಷ್ಟೇ ಬಾಕಿಯಿತ್ತು. ಹೀಗಾಗಿ ಈತನ ಬಂಧನವಾಗುತ್ತಿದ್ದಂತೆ ದೆಹಲಿ ಪ್ರಮುಖ ಸ್ಥಳಗಳಲ್ಲಿ ಭಾರಿ ತಪಾಸಣೆ ನಡೆಸಲಾಗಿತ್ತು. ಒಂಟಿಯಾಗಿ ವಿಧ್ವಂಸಕ ಕೃತ್ಯ ನಡೆಸಲು ದೆಹಲಿಯ ಹಲವು ಪ್ರದೇಶಗಳಿಗೆ ಮುಷ್ತಕೀನ್ ಭೇಟಿ ನೀಡಿದ್ದ. ಗ್ರಾಮದ ಸ್ಮಶಾನದಲ್ಲಿ ಸುಧಾರಿತ ಸ್ಫೋಟಕ ಬಳಸಿ ಸ್ಫೋಟ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.