

ಬೆಂಗಳೂರು: ಕಲಬುರ್ಗಿ ಜಿಲ್ಲೆಯ ಗ್ರಂಥಾಲಯದ ನೌಕರಿಯಲ್ಲಿದ್ದ ಮಹಿಳೆಯದು ಆತ್ಮಹತ್ಯೆಯಲ್ಲ; ಅದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿ, ಅತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ನೌಕರರು ನ್ಯಾಯಕ್ಕಾಗಿ ಮುಷ್ಕರ ನಡೆಸುತ್ತಿದ್ದಾರೆ. ಘಟನೆಯನ್ನು ಮುಚ್ಚಿ ಹಾಕುವ ಎಸ್‍ಐಟಿ, ಆಯೋಗ ರಚಿಸುವ ಸಾಧ್ಯತೆ ಇದೆ ಎಂಬ ಸಂದೇಹ ವ್ಯಕ್ತಪಡಿಸಿದರು.
ವೇತನ ಸಿಗದೇ ಗ್ರಂಥಪಾಲಕರ ಆತ್ಮಹತ್ಯೆ, ಬಿಲ್ ಪಾವತಿ ಆಗದೇ ಗುತ್ತಿಗೆದಾರರ ಆತ್ಮಹತ್ಯೆ, ವರ್ಗಾವಣೆ ಕಮಿಷನ್ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ, ನಿಗಮಗಳಲ್ಲಿ ಸರ್ಕಾರಿ ಸಾಲ ಸಿಗದೇ ಮೈಕ್ರೋ ಫೈನಾನ್ಸ್ ಕಿರುಕುಳದಲ್ಲಿ ಬಡವರ ಆತ್ಮಹತ್ಯೆ, ಬರ ಮತ್ತು ಅತಿವೃಷ್ಟಿಯಿಂದ ಪರಿಹಾರ ಸಿಗದೇ 300ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಭಾಗ್ಯವನ್ನು ಆರನೇ ಗ್ಯಾರಂಟಿಯಾಗಿ ನೀಡಿದೆ ಎಂದು ಟೀಕಿಸಿದರು.
ಕಲಬುರ್ಗಿಯ ಆ ಡೆತ್ ನೋಟ್ ಕೂಡ ಮುಚ್ಚಿ ಹಾಕಿದ್ದಾರೆ. ಕಾಂಗ್ರೆಸ್ಸಿನವರು ಎಂದಿನಂತೆ ಮನೆಗೆ ಹೋಗಿ ಹಣ ಕೊಟ್ಟು ಹೊಂದಾಣಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಹಿಮಾಚಲ ಪ್ರದೇಶಕ್ಕಿಂತ ಅಧ್ವಾನ ಆಗಿರುವ ಸರ್ಕಾರವಿದು ಎಂದು ದೂರಿದರು.
ದೀಪಾವಳಿ ಬರಲಿದೆ; ಕರ್ನಾಟಕದಲ್ಲಿ ಬೆಳಕು ಮೂಡಲಿದೆ ಎಂದು ನಾವೆಲ್ಲ ತಿಳಿದುಕೊಂಡಿದ್ದೆವು. ಆದರೆ, ಕರ್ನಾಟಕವನ್ನು ಬೆಳಗಿಸುವ ದೀಪಗಳು, ಗ್ರಂಥಾಲಯಗಳು, ಜ್ಞಾನ ಭಂಡಾರಗಳು ಇವತ್ತು ಆತ್ಮಹತ್ಯೆಯ ಭಂಡಾರವಾಗುತ್ತಿವೆ ಎಂದು ನೋವಿನಿಂದ ನುಡಿದರು.
ಸಚಿವರಿಗೆ ಸಿದ್ದರಾಮಯ್ಯ ಟಾರ್ಗೆಟ್ ಫಿಕ್ಸ್ ಆಗಿದೆ; ಕರ್ನಾಟಕದ ಬೊಕ್ಕಸ ಬರಿದಾಗಿದೆ. ಇದು ಡಿನ್ನರ್ ರಾಜಕೀಯದ ಕಾರ್ಯಸೂಚಿ ಎಂದು ಆರ್. ಅಶೋಕ್ ಆರೋಪಿಸಿದರು.
ಬಿಹಾರಕ್ಕೆ 300 ಕೋಟಿಗೆ ಸಂಬಂಧಿಸಿ 300 ಚಿನ್ನದ ಗಟ್ಟಿಗಳು ಹೋಗಬೇಕಿತ್ತು. ಈಗ ಸಿದ್ದರಾಮಯ್ಯನವರು ಎಲ್ಲ ಸಚಿವರಿಗೆ ಒಂದೊಂದು ಚಿನ್ನದ ಗಟ್ಟಿ ಫಿಕ್ಸ್ ಮಾಡಿದ್ದಾರೆ. ಇಲಾಖೆ ಭಾರದನ್ವಯ ಕೋಟಿ ಕೋಟಿ ಕೊಟ್ಟರೆ ನೀವು ಡಿಸೆಂಬರ್‍ನಲ್ಲಿ ಸಚಿವರಾಗಿ ಇರುತ್ತೀರಿ; ಇಲ್ಲವಾದರೆ, ಜನವರಿಯಲ್ಲಿ ನೀವು ಇರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು. 300 ರೂ. ಊಟ ಕೊಟ್ಟು 300 ಕೋಟಿ ವಸೂಲಿ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ಎಂದು ಶಿವಕುಮಾರ್ ಹೇಳಿದರೆ, ಸಿದ್ದರಾಮಯ್ಯ ಎಂಎಲ್‍ಎಗಳು ಎನ್ನುತ್ತಾರೆ ಎಂದು ಗಮನ ಸೆಳೆದರು. ಎಂಎಲ್‍ಎಗಳೇ ಮುಖ್ಯಮಂತ್ರಿ ಮಾಡುವುದಾಗಿದ್ದರೆ ರಾಜೀವ್ ಗಾಂಧಿ ಬಂದು ವಿಮಾನನಿಲ್ದಾಣದಲ್ಲೇ ವೀರೇಂದ್ರ ಪಾಟೀಲರನ್ನು ಡಮಾರ್ (ವಜಾ) ಎನಿಸಿ ಹೋದರಲ್ಲವೇ? ಆಗ ಶಾಸಕರ ಸಭೆ ಕರೆದಿದ್ದರೆ ಸಿದ್ದರಾಮಯ್ಯನವರೇ ಎಂದು ಆರ್.ಅಶೋಕ್ ಕೇಳಿದರು.
ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.