

ನೆಲಮಂಗಲ: ಬೇರೊಬ್ಬರ ಹೆಂಡ್ತಿ ಜತೆ ಮನೆಬಿಟ್ಟು ಓಡಿಹೋಗಿದ್ದ ಯುವಕನನ್ನು ಪೊಲೀಸ್ ಠಾಣೆಗೆ ಕರೆಸಿ ಬುದ್ಧಿಮಾತು ಹೇಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿ ವಿವಾಹಿತ ಮಹಿಳೆಯೊಂದಿಗೆ ಯುವಕನೊಬ್ಬ ಮೂರು ದಿನಗಳ ಹಿಂದೆ ಪರಾರಿಯಾಗಿದ್ದ. ಈ ಜೋಡಿಯನ್ನು ಇಂದು (ಮಂಗಳವಾರ) ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಪಿಎಸ್‌ಐ ಮಂಜುನಾಥ್ ರಾಜಿ ಪಂಚಾಯ್ತಿ ಮಾಡುತ್ತಿದ್ದರು. ಬುದ್ಧಿಮಾತು ಹೇಳಿದ್ದ ವೇಳೆ ಹತಾಶೆಗೊಂಡ ಯುವಕ, ಠಾಣೆಯಲ್ಲೇ ಇದ್ದ ಸ್ಯಾನಿಟೈಸರ್ ಅನ್ನು ಎತ್ತಿಕೊಂಡು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮೂರು ದಿನಗಳ ಹಿಂದೆ ಪರಾರಿಯಾಗಿದ್ದ ಜೋಡಿ ಈ ಹಿಂದೆಯೇ ಪ್ರೀತಿಸುತ್ತಿದ್ದರು. ಮಹಿಳೆಯ ಮದುವೆಗೂ ಮುನ್ನವೇ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆದರೆ, ಯುವತಿ ಮದುವೆ ಬೇರೊಬ್ಬನ ಜತೆ ಆಗಿದೆ. ಮದುವೆ ಆದ ಬಳಿಕವೂ ಹಳೇ ಪ್ರೀತಿ ಹಸಿಯಾಗೇ ಇತ್ತು. ಒಬ್ಬರನ್ನೊಬ್ಬರು ಬಿಟ್ಟಿರಲಾಗದ ಆ ಜೋಡಿ ಮನೆ ಬಿಟ್ಟು ಓಡಿಹೋಗಿತ್ತು.
ಪ್ರಕರಣ ಠಾಣೆ ಮೆಟ್ಟಿಲೇರಿದ್ದರಿಂದ ಆ ಜೋಡಿಯನ್ನು ಕರೆಸಿ ಪೊಲೀಸರು ಬುದ್ಧಿಮಾತು ಹೇಳುತ್ತಿದ್ದರು. ಅಷ್ಟರಲ್ಲಿ ಆ ಯುವಕನು ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡ ಆತನನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.