'ಅಪ್ಪ.. ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?' ಎಂದ ಮಗ ಬಾರದ ಲೋಕಕ್ಕೆ ಸೇರಿಯೇಬಿಟ್ಟ!

mohith death
Published on

ತರೀಕೆರೆ: 'ಅಪ್ಪಾ, ಇಂಗ್ಲಿಷ್ ಸಬ್ಜೆಕ್ಟ್ ಪರೀಕ್ಷೆ ಬರೆದುಬಿಟ್ಟಿದ್ದರೆ ಒಳ್ಳೆಯ ಸ್ಕೋರ್ ಬರ್ತಿತ್ತು. ಆಮೇಲೆ ನನ್ನ ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?'... ಪಿಯುಸಿ ಫಲಿತಾಂಶ ನೋಡಿ ಈ ಪ್ರಶ್ನೆ ಕೇಳಿದ್ದ ಮಗ ಸಂಜೆ ವೇಳೆಗೆ ಇನ್ನಿಲ್ಲವಾದರೆ ಹೆತ್ತವರಿಗೆ ಹೇಗಾಗಬೇಡ?

ತರೀಕೆರೆಯ ಲಿಂಗಮೂರ್ತಿ ಮತ್ತು ವೇದಾವತಿ ದಂಪತಿ ಪುತ್ರ ಮೋಹಿತ್, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಐದು ವಿಷಯಗಳ ಪರೀಕ್ಷೆ ಬರೆದಿದ್ದ ಆತ, ಲಾಕ್‌ಡೌನ್ ಕಾರಣ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ ಆಗಿದ್ದರಿಂದ ತರೀಕೆರೆಗೆ ವಾಪಸ್ ಬಂದಿದ್ದ.

ಇದೇ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾದ ಮೋಹಿತ್​ಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದ್ದರು. ಅನಾರೋಗ್ಯದಿಂದಾಗಿ ಇಂಗ್ಲಿಷ್ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.

ಜು.14ರಂದು ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಪ್ರತಿಶತ 92 ಅಂಕಗಳು ಬಂದಿದ್ದವು. ಫಲಿತಾಂಶ ನೋಡಿ ಸಂಭ್ರಮಿಸಿದ್ದ ಮೋಹಿತ್, 'ಅಪ್ಪಾ, ಒಳ್ಳೆಯ ಮಾರ್ಕ್ಸ್ ಬಂದಿದೆ. ಇಂಗ್ಲಿಷ್‌ನಲ್ಲೂ ಒಳ್ಳೆಯ ಮಾರ್ಕ್ಸ್ ಬಂದು ಪಾಸಾಗಿದ್ದರೆ ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?' ಎಂದು ತಂದೆಯನ್ನು ಕೇಳಿದ್ದ. ದುರ್ದೈವ ಫಲಿತಾಂಶ ಪ್ರಕಟವಾದ ದಿನವೇ ಆತ ಕೊನೆಯುಸಿರೆಳೆದಿದ್ದಾನೆ. ಮಗನನ್ನು ಕಳೆದುಕೊಂಡ ಮನೆಯಲ್ಲಿ ಶೋಕ ಮಡುಗಟ್ಟಿದೆ. ಮಗನನ್ನ ನೆನದು ಹೆತ್ತವರು ಕಣೀರಾಗುತ್ತಲೇ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net