ನಾಯಕ ಎಂದು ನಮೂದಿಸಲು ಸಲಹೆ

valmiki
Published on

ಶಿವಮೊಗ್ಗ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷೆಯ ಜಾತಿ ಕಾಲಂನಲ್ಲಿ ನಾಯಕ ಎಂದೇ ಬರೆಯಿಸುವಂತೆ ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ಅಧ್ಯಕ್ಷ ಎಚ್.ಆರ್.ಹನುಮಂತಪ್ಪ ತಿಳಿಸಿದರು.

ಈಗಾಗಲೇ ವಾಲ್ಮೀಕಿ ಮಹಾಸಂಸ್ಥಾನ ರಾಜನಹಳ್ಳಿ ಮಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಎಲ್ಲ ಮುಖಂಡರಿಂದ ಸಲಹೆ ಪಡೆದು, ರಾಜ್ಯದ 31 ಜಿಲ್ಲೆಗಳಿಗೆ ಈ ಸಂದೇಶ ಕಳುಹಿಸಿದ್ದಾರೆ. ಅವರ ಸಲಹೆ ಮತ್ತು ಮಾರ್ಗದರ್ಶನದಂತೆ ಸಮೀಕ್ಷೆ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ನಾಯಕ ಎಂದೇ ಬರೆಯಿಸಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಳಿದಂತೆ ಕಾಲಂ ನಂ.10ರಲ್ಲಿ ಯಾವ ಉಪಜಾತಿಯ ಹೆಸರನ್ನೂ ಬರೆಸಬಾರದು. ಆದರೆ ಕಾಲಂ ನಂ.11ರಲ್ಲಿ ಮಾತ್ರ ಜಾತಿಗೆ ಇರುವ ಸಮನಾರ್ಥದ ಪರ್ಯಾಯ ಹೆಸರುಗಳಿಂದ ಕರೆಯಲ್ಪಡುವ ನಾಯಕ, ನಾಯಿಕ್, ನಾಯಕ್, ಬೇಡ, ಬೇಡರ್, ವಾಲ್ಮೀಕಿ, ನಾಯಕ ಪರಿವಾರ, ನಾಯಕ ತಳವಾರ ಎಂದೇ ಬರೆಸಬೇಕೆಂದರು.

ವಾಲ್ಮೀಕಿ ಸಮಾಜದ ಮುಖಂಡ ಬಿ.ಎಸ್.ನಾಗರಾಜ್ ಮಾತನಾಡಿ, ನ್ಯಾಯಬದ್ಧ ಹಕ್ಕನ್ನು ಪಡೆಯಬೇಕಾದರೆ ನಾವೆಲ್ಲರೂ ಸಂಘಟಿತವಾಗಿ ಇರಬೇಕು. ಹಾಗಾಗಿ ಶ್ರೀಗಳ ಆದೇಶದಂತೆ ನಾವು ನಡೆದುಕೊಳ್ಳಬೇಕು. ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ನೆಲೆಸಿರುವ ಸಮಾಜದವರು ಸಮೀಕ್ಷೆದಾರರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಹೇಳಿದರು.

ಪ್ರಮುಖರಾದ ಸುರೇಶ್, ಸುಧಾಮಣಿ ಬೋರಯ್ಯ, ಟಿ.ರಂಗಪ್ಪ, ರುದ್ರೇಶ್ ಬೀರನಕೆರೆ, ಸಿದ್ದಲಿಂಗಪ್ಪ, ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net