

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಅನುಷ್ಠಾನದ ಕುರಿತು ಶಾಲಾ-ಕಾಲೇಜುಗಳ ಶಿಕ್ಷಕರಿಂದ ಶಿಕ್ಷಣ ಸಚಿವಾಲಯ ಸಲಹೆ ಆಹ್ವಾನಿಸಿದೆ. ಎನ್ಇಪಿ 2020 ಜಾರಿಯಲ್ಲಿ ಶಿಕ್ಷಕರು ಮುಖ್ಯ ಪಾತ್ರ ನಿರ್ವಹಿಸುತ್ತಾರೆನ್ನುವುದು ನಮ್ಮ ಅಭಿಪ್ರಾಯ. ಆದ್ದರಿಂದ ಜಾರಿ ಪ್ರಕ್ರಿಯೆಯನ್ನು ಮುಂದಕ್ಕೊಯ್ಯುವ ಕುರಿತು ದೇಶದಾದ್ಯಂತದ ಶಿಕ್ಷಕರು ಮತ್ತು ಪ್ರಿನ್ಸಿಪಾಲರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.
ಪ್ರಶ್ನಾವಳಿ ಮಾದರಿ: ಸಲಹೆ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿ ಪ್ರಶ್ನಾವಳಿ ರೂಪಿಸಲಾಗಿದೆ. ಶಿಕ್ಷಕರು ತಮ್ಮ ಅನುಭವದ ಆಧಾರದಲ್ಲೇ ಉತ್ತರ ನೀಡಬಹುದಾದ ರೀತಿಯಲ್ಲಿ ಅದನ್ನು ರೂಪಿಸಿರುವುದಾಗಿ ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಹೇಳಿದ್ದಾರೆ. ಶಿಕ್ಷಣ ಸಚಿವಾಲಯ ವೆಬ್ಸೈಟ್ನಲ್ಲಿ ಸಲಹೆಗೆಂದೇ ಇರುವ ಲಿಂಕ್ಗೆ ಆಗಸ್ಟ್ 24ರಿಂದ 31ರವರೆಗೆ ಸಲಹೆಗಳನ್ನು ಅಪ್ಲೋಡ್ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.