ಒಂಟಿ ಮಹಿಳೆಯ ಉಸಿರುಗಟ್ಟಿಸಿ ಕೊಲೆ

Crime Logo
Published on

ಬೆಂಗಳೂರು: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಒಂಟಿ ಮಹಿಳೆಯ ಮೇಲೆ ಹಲ್ಲೆಗೈದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಹೊಂಗಸಂದ್ರ ನಿವಾಸಿ ಜಯಮ್ಮ(೪೪) ಕೊಲೆಯಾದವರು. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮಗ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಜಯಮ್ಮ ಅವರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಯಮ್ಮಗೆ ಇಬ್ಬರು ಮಕ್ಕಳಿದ್ದು, ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಇಬ್ಬರು ಪುತ್ರರ ಪೈಕಿ ಒಬ್ಬ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಮತ್ತೊಬ್ಬ ಮಗನಿಗೆ ನಿಶ್ಚಿತ ಕೆಲಸವಿಲ್ಲ. ಸ್ನೇಹಿತರ ಜತೆ ಸುತ್ತಾಡಿಕೊಂಡು ಇರುತ್ತಾನೆ. ಜಯಮ್ಮಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಶುಕ್ರವಾರ ರಾತ್ರಿ ಜಯಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ತಡರಾತ್ರಿ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಜಯಮ್ಮ ಅವರ ಮುಖಕ್ಕೆ ಹಲ್ಲೆ ಮಾಡಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕರ್ತವ್ಯ ಮುಗಿಸಿಕೊಂಡು ಮುಂಜಾನೆ ಮಗ ಮನೆಗೆ ಬಂದಾಗ ಜಯಮ್ಮ ಕೊಲೆ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಜಯಮ್ಮ ಅವರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಯಮ್ಮ ಯಾವುದೇ ಕೆಲಸಕ್ಕೆ ಹೋಗದಿದ್ದರೂ ಸಣ್ಣಪುಟ್ಟ ಹಣಕಾಸು ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ.

ಪರಿಚಿತರಿಂದಲೇ ಕೃತ್ಯ?

ಜಯಮ್ಮ ಅವರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಣಕಾಸು ವ್ಯವಹಾರ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪರಿಚಿತರೇ ಕೊಲೆ ಮಾಡಿರುವವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net