

ಎಲ್ಲ ಬರಿ ಗೊಣಗಾಟ, ತಿಣಕಾಟ, ತಡಕಾಟ |
ಇಲ್ಲ ನಮಗೂರೆಕೋಲ್, ತಿಳಿಬೆಳಕುಮಿಲ್ಲ ||
ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು |
ಸಲ್ಲದುಬ್ಬಟೆ ನಮಗೆ - ಮಂಕುತಿಮ್ಮ ||
ಇದುವರೆಗೂ ಕಾಣದೆ ಇರುವ ಊರೊಂದಕ್ಕೆ ನಾವು ಪಯಣ ಹೊರಟಿದ್ದೇವೆ. ನಮ್ಮಂತೆಯೇ ಹಲವರು ನಡೆಯುತ್ತಿದ್ದರೂ ಅವರಾರೂ ನಮಗೆ ಪೂರ್ತಿ ಪರಿಚಿತರಲ್ಲ. ಸುತ್ತಲಿನವರು ಜತೆಗಿರುತ್ತಾರೆ ಎಂದು ಯಾರನ್ನೂ ನಂಬುವಂತಿಲ್ಲ. ತರಗೆಲೆಯಂತೆ ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಹಾರಾಡುವುದು, ಉಳಿವಿಗೆ ಹೋರಾಡುವುದು ಮನುಷ್ಯರ ಜೀವನದ ರೀತಿ, ಅದನ್ನು ಅನುಸರಿಸುವುದೇ ಬಾಳ ನೀತಿ. ಹಾಗಾಗಿ ದಾರಿಯುದ್ದಕ್ಕೂ ಆತಂಕ, ಅಂಜಿಕೆ ಸಹಜವಾಗಿಯೇ ಇರುತ್ತದೆ. ಈ ಜೀವಯಾನದಲ್ಲಿ ಕೈಗೆ ಬಂದ ತುತ್ತು ಬಾಯಿಗೆಟುಕದೆಯೆ ನೆಲಕ್ಕುರುಳಿದಾಗ, ಭಾವಿಸಿದಂತೆಯೇ ಬದುಕಿಲ್ಲ ಎಂದು ತಿಳಿದಾಗ ವ್ಯಕ್ತಿ ಗೊಣಗುತ್ತಾನೆ. ಅನಿರೀಕ್ಷಿತ ಸೋಲು ಮತ್ತು ಸೋಲನ್ನು ಅಪಮಾನ ಎಂದು ಭಾವಿಸುವುದರಿಂದಾಗಿ ಸಿಡುಕು, ಜಗಳ ಕಾಣಿಸಿಕೊಳ್ಳುತ್ತದೆ. ಬಯಸಿದ್ದನ್ನು ಹೇಗಾದರೂ ಪಡೆದೇ ತೀರಬೇಕೆಂಬ ಹಠಕ್ಕೆ ಬೀಳುತ್ತಾನೆ, ದಕ್ಕದೆ ಹೋದರೆ ವಕ್ರಮಾರ್ಗದಲ್ಲಾದರೂ ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕಳೆದುಕೊಂಡದ್ದನ್ನು ತಡಕಾಡುವುದು, ಅರ್ಥವಿಲ್ಲದ ಕನಸು-ನಿರೀಕ್ಷೆಗಳ ಭ್ರಮೆಯಲ್ಲಿ ಕುರುಡರಂತೆ ವರ್ತಿಸುವ ಅತಿರೇಕವೂ ಇಲ್ಲದಿಲ್ಲ. ಹೀಗೆ ಏರಿಳಿತದ ದಾರಿಯಲ್ಲಿ ಎದ್ದು-ಬಿದ್ದು ದಾರಿ ನಡೆಯುವಾಗ ಕೈಗಳು ಆಸರೆಗಾಗಿ ತಡಕಾಡುತ್ತವೆ. ಮುಳುಗುವವನಿಗಷ್ಟೇ ಅಲ್ಲ ನೆಲದಲ್ಲಿ ನಡೆವವನಿಗೂ ಆಸರೆ ಬೇಕು ಎನಿಸುತ್ತದೆ. ಅದರ ರಕ್ಷಣೆಯಲ್ಲಿ ನಿರಾಳವಾಗಿ ನಡೆಯಬಹುದೆಂದು ಯೋಚಿಸುತ್ತಾನೆ. ಆದರೆ ಆತನ ಮನಸ್ಸಿಗೆ ಯಾವ ಊರುಗೋಲೂ ಸರಿ ಎನಿಸುವುದಿಲ್ಲ. ಆರಂಭದಲ್ಲಿ ಅದ್ವಿತೀಯವೆನಿಸಿದ್ದು, ಕಾಲಕಳೆದಂತೆ ಅಪನಂಬಿಕೆ ಹುಟ್ಟಿಸುತ್ತದೆ. ಅಳೆದು ಸುರಿದು ತುಲನೆ ಮಾಡಿ ರೂಪುಗೊಂಡ ನಂಬಿಕೆ ಕೆಲವೇ ದಿನಗಳಲ್ಲಿ ಸಂದೇಹಗಳಿಂದ ಮುರಿದುಹೋಗುತ್ತದೆ. ಹಳೆಯದನ್ನೆಲ್ಲ ಸಂಶಯದಿಂದ ನೋಡುತ್ತ, ಹೊಸದೇನೂ ಗೋಚರವಾಗದೆ ಎಡಬಿಡಂಗಿಯಂತೆ ಸುತ್ತುವುದೇ ಬದುಕಾಗಿದೆ.
ಹೇಗೆ ಮಸುಕು ಬೆಳಕಿನಲ್ಲಿ ಯಾವುದೂ ಸ್ಪಷ್ಟವಾಗಿ ಕಾಣದೋ ಹಾಗೆಯೇ ಅಜ್ಞಾನದ ಕತ್ತಲೆ ಆವರಿಸಿರುವ ಮನಸ್ಸಿಗೆ ಉತ್ತಮ ಅಂಶಗಳ್ಯಾವುವೂ ಕಾಣಲಾರವು. ಇದರಿಂದಾಗಿ ಮನಸ್ಸು ಸದಾ ಉದ್ವಿಗ್ನತೆಯಿಂದ ಬಳಲುತ್ತದೆ. ನಿದ್ರೆಯ ಅಮಲಿನಲ್ಲಿ ಇರುವಾತನಿಗೆ ತಾನು ಯಾರು? ಎಲ್ಲಿದ್ದೇನೆ ಎನ್ನುವುದು ತಿಳಿಯದೆ ಭ್ರಮಾಧೀನನಾಗಿರುವಂತೆಯೇ ಲೋಕದ ಜಂಜಾಟದಲ್ಲಿ ಮುಳುಗಿ-ತೇಲುವ ಜೀವವು ಬಾಹ್ಯ ಮತ್ತು ಆಂತರಿಕ ಒತ್ತಡಗಳ ತಿಕ್ಕಾಟದಿಂದಾಗಿ ತೀವ್ರವಾಗಿ ಬಳಲುತ್ತದೆ. ಯಾವ ಕಾರ್ಯ, ಸನ್ನಿವೇಶದ ಬಗ್ಗೆಯೂ ಸಮಗ್ರವಾಗಿ ಯೋಚಿಸದೆ ಆರಂಭದಲ್ಲಿ ಅತೀಉತ್ಸಾಹವನ್ನು ತೋರುವುದು, ದಿನ ಸರಿದಂತೆ ನಿರುತ್ಸಾಹಿಗಳಾಗಿ ಇನ್ನೊಂದರತ್ತ ಹೊರಳುವ ಅನಿಶ್ಚಿತ ನಿಲುವು, ಪರಿಣಾಮವಾಗಿ ಸೋಲು ಮನಸ್ಸು ಬದುಕನ್ನೇ ಕಾಡುತ್ತದೆ.
ಈ ಗೊಂದಲದಿಂದ ಪಾರಾಗಲು ನಮ್ಮ ಆಂತರ್ಯವನ್ನು ಅರಿಯಲು ಪ್ರಯತ್ನಿಸಬೇಕು. ಮನಸ್ಸು ಉದ್ವೇಗಕ್ಕೆ ಒಳಗಾಗದಂತೆ ಶಾಂತವಾಗಿರುವುದನ್ನು ಅಭ್ಯಾಸ ಮುಖೇನ ಸಿದ್ಧಿಸಿಕೊಳ್ಳಬೇಕು. ಮೌನದೊಳಗೆ ಭಾವಲಹರಿಯನ್ನು ಗಮನಿಸುತ್ತಾ ಒಂದಷ್ಟು ಹೊತ್ತು ಅಂತಮುಖಿಯಾಗುವುದರಿಂದ ಆಂತರಿಕ ತುಮುಲಗಳು ಕಡಿಮೆಯಾಗಿ ಮನಸ್ಸು ಸ್ಥಿರವಾಗುತ್ತದೆ. ಇದು ರೂಢಿಯಾದರೆ ನಿಖರವಾದ ನಿರ್ಧಾರ, ಉದಾತ್ತ ಚಿಂತನೆಗಳೊಂದಿಗೆ ಜೀವನೋತ್ಸಾಹದಲ್ಲಿ ಬಾಳುವುದು ಸಾಧ್ಯವಾಗುತ್ತದೆ.