

ಹೈದರಾಬಾದ್: ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ ಬಳಿಕ ಬ್ಲಾಕ್ಬ್ಲಸ್ಟರ್ ಹಿಟ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದು ಗೊತ್ತೆ ಇದೆ. ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ಬಚ್ಚನ್, ಕಮಲ್ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ದಿಶಾ ಪಟಾನಿ, ಸಾಸ್ವತ್ ಚಟರ್ಜಿ ಮತ್ತು ಶೋಭನಾ ನಟಿಸಿದ್ದಾರೆ.
ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಬಾಲಿವುಡ್ ನಟ ಅರ್ಷದ್ ವಾರ್ಸಿ, ಕಲ್ಕಿ 2898 ಎಡಿ ಚಿತ್ರದಲ್ಲಿನ ಪ್ರಭಾಸ್ ನಟನೆಯ ಬಗ್ಗೆ ಕಾಮೆಂಟ್ ಮಾಡಿದ್ದರು. ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಪ್ರಭಾಸ್ ಅಭಿಮಾನಿಗಳು ಅರ್ಷದ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ನಿರ್ಮಾಪಕ ಅಭಿಷೇಕ್ ಅಗರ್ವಾಲ್, ನಿರ್ದೇಶಕ ಅಜಯ್ ಭೂಪತಿ ಮತ್ತು ಅನೇಕ ಟಾಲಿವುಡ್ ಸೆಲೆಬ್ರಿಟಿಗಳು ಅರ್ಷದ್ ಮಾಡಿರುವ ಕಾಮೆಂಟ್ ಅನ್ನು ಟೀಕಿಸಿದ್ದರು.
ನಮ್ಮ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ತಮ್ಮ ಕೈಲಾದಷ್ಟು ಕೆಲಸ ಮಾಡಿರುವ ಪ್ರಭಾಸ್ ಬಗ್ಗೆ ಅರ್ಷದ್ ವಾರ್ಸಿ ನೀಡಿರುವ ಹೇಳಿಕೆಗಳು ತಪ್ಪು. ರಚನಾತ್ಮಕವಾಗಿ ಟೀಕೆ ಮಾಡಿದರೆ ಪರವಾಗಿಲ್ಲ ಆದರೆ ಈ ರೀತಿ ಮಾತನಾಡಬಾರದು. ಅರ್ಷದ್ ಅವರ ಈ ಮಾತುಗಳು ಅವರಿಗೆ ವೃತ್ತಿಪರತೆಯ ಕೊರತೆ ಇದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅವರಿಂದ ಇಂಥಾ ಕಾಮೆಂಟ್ಗಳನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಟಾಲಿವುಡ್ ನಟ ಸುಧೀರ್ಬಾಬು ತಿಳಿಸಿದರು.
ನಟ ಅರ್ಷದ್ ವಾರ್ಸಿ, ಕಲ್ಕಿ ಸಿನಿಮಾವನ್ನು ನೋಡಿದೆ. ಸಿನಿಮಾದಲ್ಲಿ ಅಮಿತ್ ಜೀ ಅವರ ನಟನೆ ಅದ್ಭುತವಾಗಿದೆ. ಅವರಲ್ಲಿರುವ ಶಕ್ತಿಯಲ್ಲಿ ಸ್ವಲ್ಪವಾದರೂ ನಮಗೆ ಸಿಕ್ಕಿದರೆ ಜೀವನವು ಉತ್ತಮವಾಗಿರುತ್ತದೆ. ಆದರೆ ಪ್ರಭಾಸ್ ನಟನೆಯನ್ನು ನೋಡಿ ನನಗೆ ನಿಜವಾಗಿಯೂ ಬೇಜರಾಗಿದೆ. ಪ್ರಭಾಸ್ ಜೋಕರ್ನಂತೆ ಕಾಣುತ್ತಿದ್ದಾರೆ. ನಾನು ಮ್ಯಾಡ್ಮ್ಯಾಕ್ಸ್, ಗಿಬ್ಸನ್ ಅವರಂತೆ ನೋಡಲು ಇಷ್ಟಪಡುತ್ತೇನೆ. ಅವರು ಏಕೆ ಹೀಗೆ ನಟಿಸಿದ್ದಾರೆ ಎಂದು ನನಗೆ ಅರ್ಥವಾಗುತಿಲ್ಲ ಎಂದು ಹೇಳಿದ್ದರು. ಸುಧೀರ್ ಬಾಬು ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದ್ದು, ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.(ಏಜೆನ್ಸೀಸ್)