

ಬೆಂಗಳೂರು: ತೆಲುಗಿನ ಬ್ಲಾಕ್ಬಸ್ಟರ್ ಚಿತ್ರ 'ಆರ್.ಆರ್.ಆರ್' ತರಹ 'ವಿಜಯಾನಂದ' ಚಿತ್ರ ಸಹ ದೊಡ್ಡ ಹಿಟ್ ಆಗಲಿ ಎಂದು ಆರೋಗ್ಯ ಸಚಿವ ಸುಧಾಕರ್ ಹಾರೈಸಿದ್ದಾರೆ.
ಇದನ್ನೂ ಓದಿ: ಐದು ಭಾಷೆಗಳಲ್ಲಿ ‘ವಿಜಯಾನಂದ’ ಟ್ರೈಲರ್ ಬಿಡುಗಡೆ!
ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ಕನ್ನಡದ ಮೊದಲ ಬಯೋಪಿಕ್ ಆದ 'ವಿಜಯಾನಂದ' ಚಿತ್ರದ ಟ್ರೈಲರ್ ಬಿಡುಗಡೆ ಇಂದು ಒರಾಯನ್ ಮಾಲ್ನಲ್ಲಿ ಯಶಸ್ವಿಯಾಗಿ ಮುಗಿದಿದೆ. ಈ ಸಂದರ್ಭದಲ್ಲಿ ಚಿತ್ರದ ಹಿಂದಿ ಅವತರಣಿಕೆಯ ಟ್ರೈಲರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
'ಸಾಮಾನ್ಯವಾಗಿ ನಾನು ಸಿನಿಮಾ ಕಾರ್ಯಕ್ರಮಕ್ಕೆ ಹೋಗಲ್ಲ. ಇದಕ್ಕೂ ಮೊದಲು 'ಆರ್.ಆರ್.ಆರ್' ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ನಾನು ಮತ್ತು ಮುಖ್ಯಮಂತ್ರಿಗಳು ಭಾಗವಹಿಸಿದ್ದೆವು. ಚಿತ್ರವು ಸೂಪರ್ ಹಿಟ್ ಆಗಿತ್ತು. ಇದು ಸಹ ಅದೇ ತರಹ ದೊಡ್ಡ ಹಿಟ್ ಆಗಲಿ' ಎಂದು ಹಾರೈಸಿದರು.
'ಡಾ. ವಿಜಯ ಸಂಕೇಶ್ವರ ಅವರ ಹೆಸರಲ್ಲೇ ವಿಜಯ ಇದೆ. ಅವರು ಏನೇ ಮಾಡಿದರೂ ದೊಡ್ಡ ಯಶಸ್ಸು ಆಗುತ್ತದೆ. ಈ ಟ್ರೈಲರ್ ನೋಡಿದರೆ ಸಿನಿಮ ಎಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂಬುದು ಗೊತ್ತಾಗುತ್ತದೆ. ಎಲ್ಲರ ಹೃದಯ ಗೆಲ್ಲುವಲ್ಲಿ ಈ ಸಿನಿಮಾ ಯಶಸ್ವಿಯಾಗುತ್ತದೆ ಎಂಬ ಭರವಸೆ ನನಗಿದೆ. ಎಲ್ಲಾ ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ಈ ಸಿನಿಮಾ ನೋಡಬೇಕು. ಡಾ. ವಿಜಯ ಸಂಕೇಶ್ವರ ಅವರು ನಡೆದುಬಂದ ಹಾದಿ, ಗೆಲುವಿನ ಹಾದಿಯನ್ನ ಕಣ್ತುಂಬಿಕೊಳ್ಳಬೇಕು' ಎಂದು ಹೇಳಿದರು.