ಸರ್ಕಾರ ನಿಗದಿಪಡಿಸುವುದೇ ಅಧಿಕೃತ : ಸಚಿವ ಸುಧಾಕರ್ ಟಾಂಗ್

Ramesh Kumar Sudhakar
Published on

ಕೋಲಾರ : ಇದು ಸರ್ಕಾರಿ ಕಾರ್ಯಕ್ರಮ. ನನ್ನ ಅಥವಾ ರಮೇಶ್‌ಕುಮಾರ್ ಆಸ್ಪತ್ರೆಯಲ್ಲ. ಸರ್ಕಾರದ ಕಾರ್ಯಕ್ರಮವನ್ನು ಶಿಷ್ಟಾಚಾರದ ಪ್ರಕಾರ ಅಧಿಕೃತವಾಗಿ ಉದ್ಘಾಟಿಸಿದ್ದೇನೆ ಎಂದು

ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.

ತಾಲೂಕಿನ ಮುದುವಾಡಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಕಾರ್ಯಕ್ರಮಕ್ಕೆ ಸರ್ಕಾರವೇ ದಿನಾಂಕ ನಿಗದಿ ಮಾಡುವುದು, ಆ. 26ರಂದು ಸಿಎಂ ಜತೆ ದೆಹಲಿಗೆ ಹೋಗಿದ್ದೆ, ಹಾಗಾಗಿ ಅಂದಿನ ಕಾರ್ಯಕ್ರಮ ರದ್ದಾಗಿತ್ತು. ಇಂದು ಅಧಿಕೃತವಾಗಿ ಉದ್ಘಾಟಿಸಿದ್ದೇನೆ. ಉಸ್ತುವಾರಿ ಸಚಿವರು, ಸಂಸದರು, ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಮೊದಲು ಯಾರು ಉದ್ಘಾಟನೆ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದರು.

ಶಾಸಕ ಕೆ.ಆರ್.ರಮೇಶ್‌ಕುಮಾರ್ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಶಿಷ್ಟಾಚಾರ ಬಾಯಿ ಮಾತಿನಲ್ಲಿ ಅಲ್ಲ, ಬಂದಿದ್ದರೆ ಅವರಿಗೆ ಶೋಭೆ ತರುತ್ತಿತ್ತು. ಅವರನ್ನು ನಾನೇಕೆ ಆಹ್ವಾನಿಸಲಿ, ಅವರ ಮೇಲೆ ಭಿನ್ನಾಭಿಪ್ರಾಯ ಇಲ್ಲ,

ಅವರು ಕಾಂಗ್ರೆಸ್, ನಾನು ಬಿಜೆಪಿಯಷ್ಟೇ ಎಂದರು.

ಶೋಭೆ ತರಲ್ಲ: ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದವರು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು. ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬಿಜೆಪಿ ಸೇರುತ್ತಾರೆಯೇ ಎಂಬ ಬಗ್ಗೆ ಅವರನ್ನೇ ಕೇಳಿ ಎಂದು ನುಣುಚಿಕೊಂಡರು.

ಟಾಂಗ್: ಕೋಚಿಮುಲ್ ವಿಭಜನೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಂದ ಪ್ರತ್ಯೇಕ ಆಡಳಿತ ಮಂಡಳಿ ಬೇಡಿಕೆಯಿದೆ, ಜಿಲ್ಲೆ ಪ್ರತ್ಯೇಕವಾಗಿ 14 ವರ್ಷಗಳಾಗಿದೆ. ಹಾಲು ಉತ್ಪಾದನೆಯಲ್ಲೂ ಕೋಲಾರಕ್ಕೆ ಸಮನಾಗಿದೆ. ಪ್ರತ್ಯೇಕವಾದರೆ ಸ್ಪರ್ಧಾತ್ಮಕವಾಗಿ ಬೆಳೆಯಲು ಸಾಧ್ಯ. ರಚನಾತ್ಮಕ ದೃಷ್ಟಿಕೋನದಲ್ಲಿ ನೋಡದೆ ರಾಜಕೀಯ ಪರದೆಗಳಲ್ಲಿ ನೋಡಿದರೆ ಅರ್ಥವಾಗುವುದಿಲ್ಲ ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರಿಗೆ ಟಾಂಗ್ ನೀಡಿದ ಸಚಿವರು, ಮೆಗಾ ಡೇರಿಗೆ ತೊಂದರೆಯಾಗದು ಎಂದರು.

2 ನಿಮಿಷ ಡೆಡ್‌ಲೈನ್: ಮುದುವಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್ ಕಡಿತಗೊಂಡಿತು. ಜಿಲ್ಲಾ ಉಸ್ತುವಾರಿ ಸಚಿವ ಗರಂ ಆಗುತ್ತಿದ್ದಂತೆ ಜಿಪಂ ಸಿಇಒ ಎನ್.ಎಂ.ನಾಗರಾಜ್ ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮೊಬೈಲ್ ಸಚಿವರ ಕೈಗಿತ್ತರು. ಎರಡು ನಿಮಿಷದಲ್ಲಿ ಕರೆಂಟ್ ಬರಬೇಕು, ಮೂರು ನಿಮಿಷವಾದರೆ ಅಷ್ಟೇ ಎಂದು ಬೆಸ್ಕಾಂ ಅಧಿಕಾರಿಗೆ ಎಚ್ಚರಿಕೆ ಕೊಟ್ಟು ಕರೆ ಕಡಿತ

ಮಾಡಿದ ಒಂದೇ ನಿಮಿಷದಲ್ಲಿ ಕರೆಂಟ್ ಬಂತು.

ಕೆಎಸ್‌ಆರ್‌ಪಿ ತುಕಡಿ: ಆ.26ರಂದು ನಿಗದಿಯಾಗಿದ್ದ ಕಾರ್ಯಕ್ರಮ ರದ್ದಾಗಿದ್ದರೂ ಶಾಸಕ ರಮೇಶ್‌ಕುಮಾರ್

ಆಸ್ಪತ್ರೆ ಕಟ್ಟಡ ಉದ್ಘಾಟನೆ ಶಾಸ್ತ್ರಮುಗಿಸಿದ್ದರು.

ಆರೋಗ್ಯ ಸಚಿವರ ಉಪಸ್ಥಿತಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದ ಯಶಸ್ವಿಗೆ ಮಾಜಿ ಶಾಸಕ ಜೆಡಿಎಸ್‌ನ ಜಿ.ಕೆ. ವೆಂಕಟಶಿವಾರೆಡ್ಡಿ ಟೊಂಕ ಕಟ್ಟಿ ಮುಂದೆ ನಿಂತು ವ್ಯವಸ್ಥೆ ಮಾಡಿಸಿದ್ದರು. ರಾಜಕೀಯ ಕಾರಣಗಳಿಗೆ ಬಿಗುವಿನ ವಾತಾವರಣದ ಸಾಧ್ಯತೆ ಹಿನ್ನೆಲೆಯಲ್ಲಿ ಎಸ್ಪಿ ನೇತೃತ್ವದಲ್ಲಿ ಸ್ಥಳೀಯ ಪೊಲೀಸರ ಜತೆ ಬೆಂಗಳೂರಿನಿಂದ ಕೆಎಸ್‌ಆರ್‌ಪಿ

ತುಕಡಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಎಚ್‌ಡಿಕೆ ಗಮನಕ್ಕೆ ತಂದಿದ್ದೇನೆ: ನಾನು 4 ಬಾರಿ ಕ್ಷೇತ್ರದ ಶಾಸಕನಾಗಿದ್ದೇನೆ. ನನಗೂ ಜವಾಬ್ದಾರಿ ಇದೆ, ಆರೋಗ್ಯ ಸಚಿವರು ಬರುತ್ತಿದ್ದಾರೆಂದು ತಿಳಿದು ಬಂದಿದ್ದೇನೆ. ಫ್ಲೆಕ್ಸ್

ಗಳಲ್ಲಿ ಉಸ್ತುವಾರಿ ಸಚಿವ, ಆರೋಗ್ಯ ಸಚಿವರ ಜತೆಗೆ ನನ್ನ ಫೋಟೋವನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ. ಅಷ್ಟಕ್ಕೇ ಬಿಜೆಪಿ ಸೇರ್ಪಡೆ, ಮತ್ತೊಂದು ಯಾವುದೂ ಇಲ್ಲ. ಕಾರ್ಯಕ್ರಮಕ್ಕೆ ಹೋಗುತ್ತಿರುವ ಬಗ್ಗೆ ಎಚ್.ಡಿ.ಕುಮಾರಸ್ವಾಮಿಗೆ ಮಾಹಿತಿ ನೀಡಿದ್ದೇನೆ ಎಂದು ವೆಂಕಟಶಿವಾರೆಡ್ಡಿ ಹೇಳಿದರು.

ಇಬ್ಬರ ನಡುವೆ ಮುಸುಕಿನ ಗುದ್ದಾಟ : ಶ್ರೀನಿವಾಸಪುರ ಕ್ಷೇತ್ರದ ಮುದುವಾಡಿ, ಬೈರಗಾನಪಲ್ಲಿ, ಲಕ್ಷ್ಮೀಸಾಗರದಲ್ಲಿ ಪಿಎಚ್‌ಸಿ ಕೇಂದ್ರದ ಉದ್ಘಾಟನೆ ವಿಚಾರ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಮತ್ತು ಆರೋಗ್ಯ ಸಚಿವ ಸುಧಾಕರ್ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಯಿತು. ಆ. 26ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ದಿಢೀರ್ ರದ್ದಾಗಿತ್ತಾದರೂ ಶಾಸಕ ರಮೇಶ್‌ಕುಮಾರ್ ಮೂರು ಕಡೆ ಉದ್ಘಾಟನೆ ಶಾಸ್ತ್ರ ನೆರವೇರಿಸಿದ್ದರು.

ಆರೋಗ್ಯ ಸಚಿವರ ಉಪಸ್ಥಿತಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮಕ್ಕೆ ಗೈರಾದ ಶಾಸಕ ರಮೇಶ್‌ಕುಮಾರ್ ಬೆಳಗ್ಗೆ 9 ಗಂಟೆಗೆ ವಿಮಾನದಲ್ಲಿ ವಿಜಯವಾಡಕ್ಕೆ ಹಾರಿದ್ದರು. ಮಾಜಿ ಶಾಸಕ, ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ವೇದಿಕೆ ಅಲಂಕರಿಸಿದ್ದರು. ರಮೇಶ್‌ಕುಮಾರ್‌ಗೆ ಟಾಂಗ್ ನೀಡುವ ಸಲುವಾಗಿಯೇ ಜಿ.ಕೆ.ವೆಂಕಟಶಿವಾರೆಡ್ಡಿ ಕಾರ್ಯಕ್ರಮದ ಪೌರೋಹಿತ್ಯ ವಹಿಸಿದ್ದರು. ್ಲೆಕ್ಸ್ ಮತ್ತು ಬ್ಯಾನರ್‌ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಫೋಟೋ ರಾರಾಜಿಸಿತ್ತು. ವೆಂಕಟಶಿವಾರೆಡ್ಡಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ರಮೇಶ್‌ಕುಮಾರ್ ಬಿಟ್ಟು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಜತೆ ಗುರುತಿಸಿಕೊಂಡಿರುವ ಮಾಜಿ ಆಪ್ತರು ಹಾಜರಿದ್ದುದು ಹಲವು ರಾಜಕೀಯ ಚರ್ಚೆ ಹುಟ್ಟುಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net