ಸೈಬರ್ ವಂಚನೆ ಬಗ್ಗೆ ಅರಿವು ಮೂಡಿಸಿದ ಸುಧಾಮೂರ್ತಿ

sudhamurthy
Published on

ಬೆಂಗಳೂರು: ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರಿಗೆ ಇತ್ತೀಚೆಗೆ ಸೈಬರ್ ಕಳ್ಳರು, ವಂಚನೆ ನಡೆಸಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಸುಧಾಮೂರ್ತಿ ಅವರು ಇದೀಗ ತಮಗಾದ ಅನುಭವವನ್ನು ಹಂಚಿಕೊಳ್ಳುವುದರ ಜತೆಗೆ ಸೈಬರ್ ವಂಚನೆಯಿಂದ ಪಾರಾಗುವುದು ಹೇಗೆ ಎಂಬುದನ್ನು ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ.

ವೈಯಕ್ತಿಕ ಮಾಹಿತಿ ಪಡೆಯಲು ವಂಚಕ ಯಾವ ರೀತಿ ಕರೆ ಮಾಡಿ ಮಾತನಾಡಿದ್ದ. ವಂಚನೆ ಕರೆ ಎಂದು ತಿಳಿಯುತ್ತಿದ್ದಂತೆ ಕೈಗೊಂಡ ಕ್ರಮಗಳು ಹಾಗೂ ಅನುಸರಿಸಬೇಕಾದ ಅಂಶಗಳ ಬಗ್ಗೆ ಖುದ್ದು ಸುಧಾಮೂರ್ತಿ ಮಾತನಾಡಿದ್ದಾರೆ. ಜಾಗೃತಿ ದೃಷ್ಟಿಯಿಂದ ಬೆಂಗಳೂರು ನಗರ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪೋಸ್ಟ್ ಮಾಡಿ ಸೈಬರ್ ವಂಚನೆಯ ಜಾಲದಿಂದ ದೂರವಿರುವಂತೆ ಅರಿವು ಮೂಡಿಸುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?

ನಮಸ್ತಾರ ನಾನು ಸುಧಾಮೂರ್ತಿ, ಸೆ.೫ರಂದು ಓಣಂ ಹಬ್ಬದ ದಿನ ನನಗೆ ಫೋನ್ ಕರೆಬಂದಿತ್ತು. ಟ್ರೂ ಕಾಲರ್‌ನಲ್ಲಿ ಭಾರತೀಯ ದೂರ ಸಂಪರ್ಕ ಇಲಾಖೆಯ ಎಂದು ತೋರಿಸುತ್ತಿತ್ತು. ಈ ಇಲಾಖೆಯ ಅಧಿಕಾರಿ ಎಂದು ಹೇಳಿ ಓರ್ವ ವ್ಯಕ್ತಿ ಪರಿಚಯಿಸಿಕೊಂಡಿದ್ದ. ಈ ಹಿಂದೆ ಇದೇ ಇಲಾಖೆಯವರು ಅನ್ಯ ಕಾರಣಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು. ಮತ್ತೆ ಅವರೆ ಕರೆ ಮಾಡಿರಬಹುದು ಎಂದು ನಾನು ಭಾವಿಸಿದೆ. ಮಾತುಕತೆ ಮುಂದುವರಿಯುತ್ತಿದ್ದಂತೆ ನಿಮ್ಮ ನಂಬರ್ ಇದೇನಾ ಮೇಡಂ? ಎಂದು ಒಬ್ಬ ಹುಡುಗ ಕೇಳಿದ. ಈ ನಂಬರ್‌ನಿಂದ ಅಶ್ಲೀಲ ವಿಡಿಯೋಗಳು ಬರುತ್ತಿವೆ. ಇನ್ನೆರಡು ಗಂಟೆಗಳಲ್ಲಿ ನೀವು ಮೊಬೈಲ್ ನಂಬರ್ ಉಪಯೋಗಿಸದ ಹಾಗೆ ಸಂಪರ್ಕ ನಿಷ್ಕ್ರಿಯ ಮಾಡುತ್ತೇನೆ ಎಂದ. ನನಗೆ ಆಶ್ವರ್ಯವಾಗಿ ಮೊದಲಿಗೆ ನನ್ನ ಬಳಿ ಅಶ್ಲೀಲ ವಿಡಿಯೋಗಳಿಲ್ಲ. ಹೀಗಿದ್ದರೂ ನನ್ನ ನಂಬರ್ ಯಾಕೆ ಬ್ಲಾಕ್ ಮಾಡುತ್ತಾರೆ? ಎಂದು ಅಂದುಕೊಂಡೆ. ಈ ವೇಳೆ ಕಳೆದ ಜನವರಿಯಲ್ಲಿ ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಿದ್ದೀರಾ ಎಂದು ಪ್ರಶ್ನಿಸಿದ. ನಾನು ಕೊಟ್ಟಿಲ್ಲ ಎಂದೆ, ನನ್ನ ಸಹಾಯಕಿಯನ್ನು ಕರೆದು ಈ ಬಗ್ಗೆ ಕೇಳಿದೆ. ಆ ಅಪರಿತ ವ್ಯಕ್ತಿಯ ಕರೆ ಸ್ಥಗಿತಗೊಳಿಸಿ, ಏಕೆಂದರೆ ಆ ವ್ಯಕ್ತಿ ನಿಮ್ಮ ಆಧಾರ್ ಕಾರ್ಡ್ ಕೇಳುತ್ತಿದ್ದಾನೆ ಎಂದರು. ಈ ವೇಳೆ ಕರೆ ಮಾಡಿದ ವ್ಯಕ್ತಿಗೆ ತಾವು ಯಾರು ಎಂದು ನಾನು ಕೇಳಿದೆ ಅದಕ್ಕೆ ಆತ ನಾನು ದೂರಸಂಪರ್ಕ ಇಲಾಖೆಯು ಪಿಆರ್‌ಓ ಎಂದು ಹೇಳಿದ. ಆತನ ಮಾತಿನ ದಾಟಿಯೇ ಬದಲಾಗಿತ್ತು. ಕರೆ ಸ್ಥಗಿತಗೊಳಿಸಿ ಪರಿಶೀಲಿಸಿದಾಗ ಸೈಬರ್ ವಂಚಕರ ವಂಚನೆ ಜಾಲ ಎಂದು ತಿಳಿಯಿತು.

ಸಹಾಯವಾಣಿಯಾದ ೧೯೩೦ಗೆ ಕರೆ ಮಾಡಿ:

ಸೈಬರ್ ವಂಚಕರು ಅಮಾಯಕರಿಗೆ ಕರೆ ಮಾಡಿ ಅಧಿಕಾರಿ ಸೋಗಿನಲ್ಲಿ ದೇಶದಲ್ಲಿ ವಂಚಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಅಪರಿಚಿತ ಕರೆ ಮಾಡಿದರೆ ಆತನ ಮಾತಿನ ದಾಟಿ ತಿಳಿದುಕೊಳ್ಳಿ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಅರೆಸ್ಟ್ ವಾರೆಂಟ್ ಎಂದು ಸುಳ್ಳಿನ ಮೆಟ್ಟಿಲು ತೋರಿಸಿ ಸೈಬರ್ ವಂಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನುಮಾನಾಸ್ಪದ ಕರೆ ಬಂದರೆ ಕೂಡಲೇ ಸಹಾಯವಾಣಿ ೧೯೩೦ಗೆ ಕರೆ ಮಾಡಿ ಅಥವಾ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ನಿಮ್ಮ ಹಣವನ್ನು ಉಳಿಸಿಕೊಳ್ಳಿ ಎಂದು ಸುಧಾಮೂರ್ತಿ ಜನರಿಗೆ ತಿಳುವಳಿಕೆ ಮೂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net