ಬೆಂಗಳೂರು: ನಟ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ‘ಮಾರ್ಕ್’ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಡಿ.25ರಂದು ಸುಮಾರು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಈ ಚಿತ್ರವು ಮೊದಲ ದಿನವೇ 15.9 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಸದ್ದು ಮಾಡಿತ್ತು. ಈ ಯಶಸ್ಸಿನ ಓಟ ವೀಕೆಂಡ್‌ನಲ್ಲೂ ಮುಂದುವರಿದಿದ್ದು, ರಿಲೀಸ್ ಆದ ನಾಲ್ಕು ದಿನಕ್ಕೆ ಒಟ್ಟು 35ಕೋಟಿ ಗಳಿಕೆ ಮಾಡಿ ಬೀಗಿದೆ. ಅಷ್ಟೇ ಅಲ್ಲದೇ ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು, ದಾವಣಗೆರೆ ಹಾಗೂ ಚಾಮರಾಜನಗರ ಸೇರಿ ಹಲವು ಜಿಲ್ಲೆಗಳ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ವಾರಂತ್ಯದಲ್ಲಿ ‘ಮಾರ್ಕ್’ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ. ಯಶಸ್ಸಿನಲ್ಲಿ ಮುನ್ನುಗ್ಗುತ್ತಿರುವ ಈ ಚಿತ್ರವು ಇದೀಗ 50 ಕೋಟಿ ಕ್ಲಬ್ ಸೇರುವತ್ತ ದಾಪುಗಾಲಿಡುತ್ತಿದೆ. ‘ಮಾರ್ಕ್’ ಚಿತ್ರ ಮಾಸ್ ಎಲಿಮೆಂಟ್ ಕಥಾಹಂದರವಾಗಿದ್ದು, ನಟ ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಸ್ಟೈಲಿಶ್ ಮ್ಯಾನರಿಸಂ, ಫೈಟ್ ಹಾಗೂ ಖಡಕ್ ಪಾತ್ರದ ಮೂಲಕ ಸುದೀಪ್ ಮತ್ತೊಮ್ಮೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ನಟ ಸುದೀಪ್ ಜತೆಗೆ ನವೀನ್ ಚಂದ್ರ, ಶೈನ್ ಟಾಮ್ ಚಾಕೋ, ಯೋಗಿಬಾಬು, ದೀಪ್ಶಿಕಾ, ರೋಶಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಪ್ರತಾಪ್ ನಾರಾಯಣ್ ಪಾತ್ರಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಕನ್ನಡದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಮಾರ್ಕ್’ ಜ.1ರಿಂದ ತೆಲುಗು, ತಮಿಳಿಗೆ ಡಬ್ ಆಗಿ ರಿಲೀಸ್ ಆಗಲಿದೆ.