ದ್ವೇಷದ ರಾಜಕಾರಣಕ್ಕೆ ಶಾಸಕ ಮುನಿರತ್ನ ದಿಢೀರ್ ಬಂಧನ: ಆರ್.ಅಶೋಕ್ ಆಕ್ಷೇಪ

R Ashok
Published on

ಬೆಂಗಳೂರು: ನಿಂದನೆ, ಹಣಕ್ಕಾಗಿ ಬೆದರಿಕೆ ಹಾಕಿರುವುದು ಎನ್ನಲಾದ ಆಡಿಯೋ ನೈಜತೆ ಖಚಿತಪಡಿಸಿಕೊಳ್ಳುವ ಮುನ್ನ ಆರ್‌ಆರ್ ನಗರ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿದೆ. ಇದು, ದ್ವೇಷದ ರಾಜಕಾರಣ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿದ್ದಾರೆ.

ಕಾನೂನಿಗೆ ಯಾರೂ ಅತೀತರಲ್ಲವಾದರೂ ಬಹಿರಂಗವಾದ ಧ್ವನಿ ಮುದ್ರಣವನ್ನು ಎ್ಎಸ್‌ಎಲ್‌ಗೆ ಕಳುಹಿಸಿ, ಶಾಸಕರದ್ದೇ ಧ್ವನಿ ಎಂದು ಸಾಬೀತಾದ ಬಳಿಕ ಬಂಧಿಸಬೇಕಾಗಿತ್ತು. ಈ ಬಗ್ಗೆ ನಮ್ಮದೇನೂ ಅಭ್ಯಂತರ ಇರುತ್ತಿದ್ದಿಲ್ಲ ಎಂದು ಹೇಳಿದ್ದಾರೆ.

ಟಿ.ಜೆ.ಅಬ್ರಹಾಂ ದೂರಿನ ಆಧಾರದಲ್ಲಿ ರಾಜ್ಯಪಾಲರು ತ್ವರಿತವಾಗಿ ಕ್ರಮಕೈಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ಆದರೆ ಅದೀಗ ನ್ಯಾಯಾಲಯದಲ್ಲಿದ್ದು ನಾವ್ಯಾರು ಆಕ್ಷೇಪ ಮಾಡುತ್ತಿಲ್ಲ.

ಮುನಿರತ್ನ ವಿರುದ್ಧದ ಆರೋಪ ಪ್ರಕರಣದಲ್ಲಿ ನೋಟಿಸ್ ನೀಡಿ, ವಿಚಾರಣೆ ಮಾಡಿ ಬಂಧಿಸದಿದ್ದರೆ ತಕರಾರು ಇರುತ್ತಿದ್ದಿಲ್ಲ. ಎ್ಎಸ್‌ಎಲ್ ವರದಿ ಪಡೆದುಕೊಂಡಿಲ್ಲ. ಇದು, ಪೂರ್ವಯೋಜಿತ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ಒಬ್ಬರಿಗೊಂದು, ಮತ್ತೊಬ್ಬರಿಗೆ ಇನ್ನೊಂದು

ಪಿಎಸ್‌ಐ ಪರಶುರಾಮ ಸಾವು ಪ್ರಕರಣದ ಆರೋಪಿ ಯಾದಗಿರಿ ಜಿಲ್ಲೆಯ ಶಾಸಕನನ್ನು ಪೊಲೀಸರು ಹುಡುಕಾಡುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ತಮ್ಮ ಮನೆಗೆ ಕರೆಯಿಸಿಕೊಂಡು ಕಾಫಿ ಕೊಟ್ಟಿದ್ದರು.

ಕೃಷಿ ಅಧಿಕಾರಿಯೊಬ್ಬರು ವರ್ಗಾವಣೆಗೆ ಲಂಚದ ಒತ್ತಡದ ಬಗ್ಗೆ ನೇರ ಸಚಿವರ ವಿರುದ್ಧವೇ ದೂರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಸಂಬಂಧಿಸಿದ ಸಚಿವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ತಾರತಮ್ಯದ ಪಟ್ಟಿಯನ್ನು ಆರ್.ಅಶೋಕ್ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಆರ್‌ಆರ್‌ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಶಾಸಕ ಮುನಿರತ್ನ ಹೆಚ್ಚಿನ ಲೀಡ್ ಕೊಡಿಸಿದ್ದರು. ಇದೇ ದ್ವೇಷಕ್ಕಾಗಿ ಮುನಿರತ್ನ ಅವರನ್ನು ಬಂಧಿಸಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಗೆ ಇದು ಶೋಭೆ ತರುವುದಿಲ್ಲ.

ಭ್ರಷ್ಟಾಚಾರ, ಕೋಮುಗಲಭೆ ಪ್ರಕರಣಗಳನ್ನು ಬೇರೆಡೆ ತಿರುಗಿಸುವ ಪ್ರಯತ್ನವಾಗುತ್ತಿದೆ. ಸಾಮಾನ್ಯ ವ್ಯಕ್ತಿಯೊಬ್ಬ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಇದು ಪೂರ್ವಯೋಜಿತ ಎಂದು ಇದರಿಂದಲೇ ಗೊತ್ತಾಗುತ್ತದೆ ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net