

ಬೆಂಗಳೂರು: ಕೇರಳದಲ್ಲಿ ಸಂಭವಿಸಿದ ಗರ್ಭಿಣಿ ಆನೆಯ ಧಾರುಣ ಸಾವು, ಕರುಳು ಹಿಂಡುವ ಸನ್ನಿವೇಶವನ್ನು ಮರಳು ಕಲಾವಿದರೊಬ್ಬರು ಒಡಿಶಾದ ಪುರಿ ಕಡಲತೀರದಲ್ಲಿ ಮರಳು ಕಲೆ ಮೂಲಕ ಕಟ್ಟಿಕೊಟ್ಟಿದ್ದು, ಈ ದೃಶ್ಯ ಮನುಕುಲದ ಮಾನವೀಯತೆಯನ್ನೇ ಪ್ರಶ್ನಿಸಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ಗರ್ಭಿಣಿ ಆನೆ ಮತ್ತು ತಾಯಿಗರ್ಭದಿಂದ ಹೊರಬರುವ ಮುನ್ನವೇ ಮೃತಪಟ್ಟ ಆನೆಮರಿಗೆ ಶೋಕ ವ್ಯಕ್ತಪಡಿಸಿರುವ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್, ಆನೆ ತನ್ನ ಮಗುವಿನೊಂದಿಗೆ ನೆಲದ ಮೇಲೆ ಮಲಗಿರುವಂತೆ ಚಿತ್ರ ಬಿಡಿಸಿದ್ದಾರೆ. ಈ ಚಿತ್ರ ತಾಯಿಆನೆ ಮತ್ತು ಮರಿಯಾನೆ ಚಿರನಿದ್ರೆಗೆ ಜಾರಿದಂತಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ಸೈಲೆಂಟ್ ವ್ಯಾಲಿಯಲ್ಲಿ ಆಹಾರ ಹುಡುಕುತ್ತ ಗ್ರಾಮವೊಂದರ ಸಮೀಪ ಬಂದಿದ್ದ ಹೆಣ್ಣಾನೆಗೆ ಕೆಲ ಕಿಡಿಗೇಡಿಗಳು ಪೈನಾಪಲ್(ಅನಾನಸ್) ನಲ್ಲಿ ಪಟಾಕಿ ಇಟ್ಟು ತಿನ್ನಲು ಕೊಟ್ಟಿದ್ದರು. ಇದನ್ನು ತಿನ್ನುತ್ತಿದ್ದಂತೆ ಸ್ಫೋಟಗೊಂಡು ಆನೆಯ ಸೊಂಡಿಲು-ಬಾಯಿಗೆ ತೀವ್ರ ಗಾಯವಾಗಿತ್ತು. ಸುಟ್ಟಗಾಯದ ನೋವು ಸಹಿಸಲಾರದೆ ನದಿ ನೀರೊಳಗೆ ಹೋದ ಗರ್ಭಿಣಿ ಆನೆ ನಿಂತಲ್ಲೇ ಪ್ರಾಣಬಿಟ್ಟಿತ್ತು. ಕೆಲವೇ ತಿಂಗಳಲ್ಲಿ ಭೂಮಿ ಮೇಲೆ ಕಣ್ಣು ಬಿಡಬೇಕಿದ್ದ ಆನೆಭ್ರೂಣವೂ ತಾಯಿ ಗರ್ಭದಲ್ಲೇ ಸತ್ತಿದೆ.
ಈ ಪೈಶಾಚಿಕ ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹ ಕೇಳಿಬಂದಿದೆ. ಈ ನಡುವೆ ಮರಳು ಕಲಾವಿದ ಸುದರ್ಶನ್ ಅವರ ಚಿತ್ರವು ಮನುಕುಲದ ಮನಸ್ಥಿತಿ ಎತ್ತ ಸಾಗಿದೆ, ಮಾನವೀಯತೆ ಎಲ್ಲಿದೆ... ಎಂಬೆಲ್ಲ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ.