

Suchir Balaji: ಕಳೆದ ನವೆಂಬರ್ 26ರಂದು ಓಪನ್ಎಐ ಸಂಸ್ಥೆಯಲ್ಲಿ ಸಂಶೋಧಕರಾಗಿದ್ದ ಭಾರತೀಯ-ಅಮೆರಿಕನ್ ಮೂಲದ 26 ವರ್ಷ ವಯಸ್ಸಿನ ಸುಚಿರ್ ಬಾಲಾಜಿ, ತಾವು ನೆಲೆಸಿದ್ದ ಸ್ಯಾನ್ ಫ್ರಾನ್ಸಿಸ್ಕೊ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಂದಿನಿಂದಲೂ ಈ ಸಾವು ಆತ್ಮಹತ್ಯೆ ಎಂದೇ ಹೇಳಲಾಗಿದ್ದೇ ಆದರೂ ಸುಚಿನ್ ಹೆತ್ತವರು ಮಾತ್ರ ಇದು ಉದ್ದೇಶಪೂರ್ವಕ ಹತ್ಯೆ, ಸಂಚು ಮಾಡಿ ಮಗನನ್ನು ಬಲಿ ಪಡೆದಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಪುತ್ರ ಸಾವಿಗೀಡಾದ ಸ್ಥಳದಲ್ಲಿ ಸಿಕ್ಕ ಒಂದಷ್ಟು ಸುಳಿವುಗಳನ್ನು ಪೋಷಕರು ತಮ್ಮ ಬಳಿ ಇರಿಸಿಕೊಂಡಿರುವುದು ಗಮನಾರ್ಹ.
ಸುಚಿನ್ ಆತ್ಮಹತ್ಯೆ ಎಂದು ಹೇಳಲಾಗಿರುವ ಈ ಸಾವಿನ ಹಿಂದೆ ಅನುಮಾನಗಳ ಹುತ್ತವೇ ಸೃಷ್ಟಿಯಾಗಿದ್ದು, ಅಧಿಕಾರಿಗಳು ಇದು ಆತ್ಮಹತ್ಯೆಯೇ ಬಿಟ್ಟರೆ ಬೇರೇನೂ ಅಲ್ಲ ಎಂದರೆ, ಪೋಷಕರು ಮಾತ್ರ ಇಲ್ಲ ಇದು ಸಂಚಿನ ಕೊಲೆಯೇ ಎಂದು ಬಲವಾಗಿ ಆರೋಪಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧಕರಾಗಿದ್ದ ಸುಚಿರ್ ಬಾಲಾಜಿ, ಓಪನ್ ಎಐ ಬಗ್ಗೆ ಇಡೀ ಜಗತ್ತಿಗೆ ಎಚ್ಚರಿಕೆ ರವಾನಿಸಿದ್ದರು. ಓಪನ್ ಎಐನ ಮಾದರಿಗಳು ಅನುಮತಿಯಿಲ್ಲದೆ ಇಂಟರ್ನೆಟ್‌ನಿಂದ ಸ್ಕ್ರ್ಯಾಪ್ ಮಾಡಲಾದ ಹಕ್ಕುಸ್ವಾಮ್ಯದ ವಸ್ತುಗಳ ಮೇಲೆ ತರಬೇತಿ ಪಡೆದಿವೆ ಎಂದು ಗಂಭೀರ ಆರೋಪ ಎಸಗಿದ್ದರು. ಇದು ಬಹಳ ಹಾನಿಕಾರಕ ಎಂಬುದನ್ನು ಒತ್ತಿ ಹೇಳಿದ್ದರು. ಸಂಸ್ಥೆ ವಿರುದ್ಧ ಧ್ವನಿ ಎತ್ತಿದ್ದ ಒಂದು ತಿಂಗಳ ನಂತರ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಅನೇಕರಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ.
ಪುತ್ರನ ಸಾವಿನಿಂದ ಪ್ರತಿದಿನ ಕಣ್ಣೀರಿಡುತ್ತಿರುವ ತಾಯಿ, ಸುಚಿರ್ ಬಾಲಾಜಿ ಕೇಸ್ನಲ್ಲಿ ಎಫ್‌ಬಿಐ ತನಿಖೆ ಕೈಗೊಳ್ಳಬೇಕು. ಇಲ್ಲಿ ನಡೆದಿರುವ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಡಬೇಕು. ಮಗನ ಸಾವಿನ ಹಿಂದೆ ಯಾರದ್ದೋ ಕೈವಾಡವಿದೆ. ಅದೆಲ್ಲವೂ ಹೊರಬರಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಈ ಕುರಿತಂತ ಟ್ವೀಟ್ ಮೂಲಕ ಹೊಸ ಅಪ್ಡೇಟ್ ಹಂಚಿಕೊಂಡ ಮೃತ ಸುಚಿರ್ ತಾಯಿ ಪೂರ್ಣಿಮಾ ರಾಮರಾಂ, "ಪುತ್ರನ ಸಾವಿನ ಹಿಂದಿರುವ ಅಸಲಿ ಸಂಗತಿಯನ್ನು ಪತ್ತೆಹಚ್ಚಲು ನಾವು ಖಾಸಗಿ ತನಿಖಾಧಿಕಾರಿಯನ್ನು ನೇಮಿಸಿದ್ದೇವೆ. ಸಾವಿನ ಕಾರಣವನ್ನು ಬೆಳಕಿಗೆ ತರಲು ಎರಡನೇ ಬಾರಿಗೆ ಶವಪರೀಕ್ಷೆ ಮಾಡಿಸಿದ್ದೇವೆ. ಅಚ್ಚರಿ ಎಂದರೆ ನಾವು ಮಾಡಿಸಿದ ಶವಪರೀಕ್ಷೆಯಲ್ಲಿ ಪೊಲೀಸರು ಕೊಟ್ಟ ಕಾರಣ ಇಲ್ಲವೇ ಇಲ್ಲ. ಅದಕ್ಕೆ ವಿರುದ್ಧವಾಗಿದೆ" ಎಂಬ ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ಬುಕಾನನ್ ಸ್ಟ್ರೀಟ್‌ನಲ್ಲಿದ್ದ ಬಾಲಾಜಿ ಅಪಾರ್ಟ್ಮೆಂಟ್ನೊಳಗೆ ಯಾರೋ ನುಸುಳಿ, ಅಲ್ಲಿನ ವಸ್ತುಗಳನ್ನು ಛಿದ್ರಗೊಳಿಸಿರುವ ಸೂಚನೆಗಳು ಸಿಕ್ಕಿವೆ. ಮನೆಯಲ್ಲಿದ್ದ ಬಾತ್ರೂಮ್ನಲ್ಲಿ ಮಗ ಬದುಕಿಗಾಗಿ ಹೋರಾಡಿರುವ ಸುಳಿವು ಮತ್ತು ಗೋಡೆಗಳ ಮೇಲಿನ ರಕ್ತದ ಕಲೆಗಳನ್ನು ಗಮನಿಸಿದರೆ ಯಾರೋ ಅವನನ್ನು ಹೊಡೆದಂತೆ ತೋರುತ್ತಿದೆ. ಅಧಿಕಾರಿಗಳು ಘೋಷಿಸಿದ ಸುಸೈಡ್ ಎಂಬ ವರದಿ ಯಾಕೋ ಸಂಚಿನ ಕೊಲೆಯ ಕಥೆಯನ್ನು ಹೇಳುತ್ತಿದೆ. ಈ ಪ್ರಕರಣ ಎಫ್‌ಬಿಐ ತನಿಖೆ ಆಗಬೇಕು" ಎಂದು ಒತ್ತಾಯಿಸಿದ್ದಾರೆ.
ಅತ್ತ ಸುಚಿರ್ ಬಾಲಾಜಿ ತಾಯಿ ಟ್ವೀಟ್ ಮೂಲಕ ಎಫ್‌ಬಿಐ ತನಿಖೆಗೆ ಆಗ್ರಹಿಸುತ್ತಿದ್ದಂತೆ ಪ್ರತಿಕ್ರಿಯಿಸಿದ ಎಲೋನ್ ಮಸ್ಕ್, "ಇದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಎಂಬಂತೆ ನನಗೆ ಕಾಣಿಸುತ್ತಿಲ್ಲ" ಎಂದು ಹೇಳಿರುವುದು ಸದ್ಯ ಸಂಚಲನ ಹುಟ್ಟುಹಾಕಿದೆ. ಅಸಲಿಗೆ ಸುಚಿರ್ ಸಾವು ಆತ್ಮಹತ್ಯೆಯೋ ಅಥವಾ ಸಂಚು ಹೂಡಿ ಮಾಡಲಾದ ಹತ್ಯೆಯೋ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ,(ಏಜೆನ್ಸೀಸ್).