

ಪಣಜಿ: ಗೋವಾದಲ್ಲಿ ನಾಲ್ಕು ವರ್ಷದ ಮಗನನ್ನೇ ಕೊಂದು ಬ್ಯಾಗಿನಲ್ಲಿಟ್ಟುಕೊಂಡು ಬೆಂಗಳೂರಿನತ್ತ ಪರಾರಿಯಾಗುತ್ತಿದ್ದ ಸುಚನಾ ಸೇಠ್ಳ ವಿಚಾರಣೆ ಮುಂದುವರಿದಿದ್ದು, ಆಕೆ ಮಗುವಿಗೆ ಕಫದ ಸಿರಪ್ ಕುಡಿಸಿ ನಂತರ ಉಸಿರುಗಟ್ಟಿಸಿ ಸಾಯಿಸಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕತ್ತು ಹಿಸುಕಿ ಮಗುವನ್ನು ಕೊಂದಳೇ ಅಥವಾ ಬಟ್ಟೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿರಬಹುದೇ ಎಂಬ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಣಜಿಯ ಅಪಾರ್ಟ್ವೆುಂಟ್ ಒಂದರಲ್ಲಿ ತಂಗಿದ್ದ ಸುಚನಾ, ಮಗುವನ್ನು ಕೊಂದು ಶವವನ್ನು ಬ್ಯಾಗಿನಲ್ಲಿರಿಸಿ ಕೊಂಡು ಬೆಂಗಳೂರಿನತ್ತ ಪಲಾಯನ ಮಾಡುತ್ತಿದ್ದಾಗ ಗೋವಾ ಪೊಲೀಸರು ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ಆಕೆಯನ್ನು ಸೋಮವಾರ ಬಂಧಿಸಿದ್ದರು. ಸುಚನಾ ಉಳಿದುಕೊಂಡಿದ್ದ ಉತ್ತರ ಗೋವಾದ ಕಾಂಡೋಲಿಂನ ಸರ್ವಿಸ್ ಅಪಾರ್ಟ್ವೆುಂಟ್ನ ಕೊಠಡಿಯಲ್ಲಿ ಕಫ ಸಿರಪ್ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಕಫ ಸಿರಪ್ನ ಒಂದು ಚಿಕ್ಕ, ಹಾಗೂ ದೊಡ್ಡ ಬಾಟಲಿ ಸಿಕ್ಕಿವೆ.
ಆಕೆ ಅಪಾರ್ಟ್ವೆುಂಟ್ಗೆ ಹೋಗುವಾಗ ತನ್ನ ಲಗೇಜ್ನಲ್ಲಿ ಕಫ ಸಿರಪ್ನ ಒಂದು ಬಾಟಲಿ ಒಯ್ದಿದ್ದಳು. ನಂತರ, ಗಂಟಲು ಕೆರೆತ ಇರುವುದರಿಂದ ಇನ್ನೊಂದು ಬಾಟಲಿ ಬೇಕೆಂದು ಸ್ವಾಗತಕಾರರ ಬಳಿ ತರಿಸಿಕೊಂಡಿದ್ದಳು’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
36 ಗಂಟೆಗೂ ಮುಂಚೆ ಸಾವು: 36 ಗಂಟೆಗೂ ಮುಂಚೆಯೇ ಮಗು ಮೃತಪಟ್ಟಿದೆ. ಉಸಿರುಗಟ್ಟಿಸಿ ಅಥವಾ ಕತ್ತು ಹಿಸುಕಿ ಮಗುವನ್ನು ಕೊಲ್ಲಲಾಗಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಕರ್ನಾಟಕದ ವೈದ್ಯರೊಬ್ಬರು ಹೇಳಿದ್ದಾಗಿ ಗೋವಾದ ಸರ್ಕಾರಿ ವೈದ್ಯ ಕುಮಾರ್ ನಾಯ್್ಕ ಮಂಗಳವಾರ ತಿಳಿಸಿದ್ದರು. ಗಾಯ, ಘರ್ಷಣೆಯ ಯಾವುದೇ ಚಿಹ್ನೆಯಾಗಲೀ ದೇಹದ ಮೇಲಿಲ್ಲ. ಕೊಲೆಗೆ ತಲೆದಿಂಬು ಅಥವಾ ತಂತಿ ಬಳಸಿರಬಹುದು ಎಂದೂ ತಿಳಿಸಿದ್ದರು.
ಪೂರ್ವಯೋಜಿತ ಕೊಲೆ: ಮಗುವಿನ ಜ್ಞಾನ ತಪ್ಪಿಸಲು ಸಿರಪ್ನ ಅತಿಯಾದ ಡೋಸ್ ನೀಡಿರುವ ಸಾಧ್ಯತೆಯಿದೆ. ಹೀಗಾಗಿ ಇದೊಂದು ಪೂರ್ವಯೋಜಿತ ಕೊಲೆಯಾಗಿರಬಹುದೆಂದು ಅಂದಾಜಿಸಲಾಗಿದೆ. ಬಹುತೇಕ ಅತಿಯಾದ ಸಿರಪ್ ಸೇವನೆಯಿಂದ ಗಾಢ ನಿದ್ದೆಯಲ್ಲಿದ್ದ ಮಗು, ದುಷ್ಟ ತಾಯಿ ತನ್ನನ್ನು ಕೊಲೆ ಮಾಡುವಾಗ ಕಿರುಚಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಮೂಲಗಳು ಹೇಳಿವೆ.