

ಬೆಂಗಳೂರು: ಗಡಿ ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ಶನಿವಾರ ನಡೆದ ಕಾಮೆಡ್-ಕೆ ಯೂನಿಗೇಜ್ ಪ್ರವೇಶ ಪರೀಕ್ಷೆಯು ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಿತು. ಶೇ.86.51 ಅಭ್ಯರ್ಥಿಗಳು ಹಾಜರಾಗಿದ್ದಾರೆ.
ರಾಜ್ಯದ 24 ನಗರಗಳು ಸೇರಿ ದೇಶದ 166 ನಗರಗಳಲ್ಲಿ ಪರೀಕ್ಷೆ ಜರುಗಿತು. ಆಪರೇಷನ್ ಸಿಂಧೂರ್ ಕಾರಣದಿಂದ 13 ನಗರಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ಉಳಿದಂತೆ ಬೆಂಗಳೂರಿನ 30, ರಾಜ್ಯದ 70 ಕೇಂದ್ರಗಳು ಸೇರಿ ದೇಶದ 235 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.
ಪರೀಕ್ಷೆಯನ್ನು ಮೂರು ಅವಧಿಯಲ್ಲಿ ನಡೆಸಲಾಯಿತು. ಸಂಜೆ 5.30ರಿಂದ 8.30ರವರೆಗೆ ನಡೆಯಬೇಕಿದ್ದ ಮೂರನೇ ಸೆಷನ್ ಪರೀಕ್ಷೆಯನ್ನು 11 ಕೇಂದ್ರಗಳಲ್ಲಿ ಮುಂದೂಡಲಾಗಿದೆ. ಈ ಕೇಂದ್ರಗಳಲ್ಲಿ ಮುಂದಿನ ವಾರ ನಡೆಸಲಾಗುತ್ತದೆ.
ಒಟ್ಟಾರೆ ಪರೀಕ್ಷೆಗೆ 1,25,607 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 1,08,668 ಅಭ್ಯರ್ಥಿಗಳು (ಶೇ.86.51) ಹಾಜರಾಗಿದ್ದಾರೆ. ಬೆಂಗಳೂರಿನಲ್ಲಿ ನೋಂದಣಿ ಮಾಡಿಕೊಂಡಿದ್ದ 21,230 ಅಭ್ಯರ್ಥಿಗಳಲ್ಲಿ 18,977 ಹಾಗೂ ಕರ್ನಾಟಕದಲ್ಲಿ ನೋಂದಣಿ ಮಾಡಿಕೊಂಡಿದ್ದ 42,263ರಲ್ಲಿ 37,922 ಮಂದಿ ಹಾಜರಾಗಿದ್ದಾರೆ.
ಕೆಲವೆಡೆ ಕೈಕೊಟ್ಟ ವಿದ್ಯುತ್:
ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆಯಾಗಿತ್ತು. ಕೆಲವು ಕೇಂದ್ರಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದರಿಂದ ಅಭ್ಯರ್ಥಿಗಳು ಸಮಸ್ಯೆಯನ್ನು ಎದುರಿಸಬೇಕಾಯಿತು. ವಿದ್ಯುತ್ ವ್ಯತ್ಯಯವಾಗಿದ್ದ ಅಷ್ಟು ಸಮಯವನ್ನು ಹೆಚ್ಚುವರಿಯಾಗಿ ನೀಡಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು.
ಹಾಗೆಯೇ ಪರೀಕ್ಷೆ ಮುಗಿದ ನಂತರ ಶನಿವಾರವೇ ಪ್ರಕಟವಾಗಬೇಕಿದ್ದ ತಾತ್ಕಾಲಿಕ ಕೀ ಉತ್ತರಗಳನ್ನು ಎರಡನೇ ಹಂತರ ಪರೀಕ್ಷೆ ಮುಗಿದ ನಂತರ ಪ್ರಕಟಿಸಲಾಗುವುದು ಎಂದು ಕಾಮೆಡ್ ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್. ಕುಮಾರ್ ತಿಳಿಸಿದ್ದಾರೆ.