

ಪಿರಿಯಾಪಟ್ಟಣ: ವಿದ್ಯಾರ್ಥಿಗಳನ್ನು ಸಮಾಜಕ್ಕೆ ಬೇಕಾದ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮೈಸೂರಿನ ಮಾನಸ ಗಂಗೋತ್ರಿಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಡಿಪಿಬಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ 1980 - 86 ಅವಧಿಯ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಪುಟ್ಟಣ್ಣ ಕಣಗಾಲ್ ಬಯಲು ರಂಗ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಗುರುವಂದನಾ ಮತ್ತು ಕಂಪ್ಯೂಟರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಒಡನಾಟ ಉತ್ತಮವಾಗಿದ್ದಲ್ಲಿ ನಮ್ಮ ಕಲಿಕೆ ಮತ್ತು ಶೈಕ್ಷಣಿಕ ಪ್ರಗತಿಯು ಯಶಸ್ಸಿನ ಹಾದಿಯತ್ತ ಸಾಗಲಿದೆ ಎಂದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಾಡುವ ಸೌಲಭ್ಯಗಳ ಕೊರತೆಯ ನಡುವೆಯೂ ಪರಿಶ್ರಮದಿಂದ ಅಭ್ಯಾಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಪ್ರಶಂಸನೀಯ ಸಂಗತಿ. ತಾವು ಓದಿ ಕಲಿತ ವಿದ್ಯಾಸಂಸ್ಥೆಗೆ ಏನನ್ನಾದರೂ ಸಹಾಯ ಮಾಡಬೇಕೆಂಬ ಮನಸ್ಥಿತಿ ಹಲವರಲ್ಲಿ ಇರುತ್ತದೆ. ಅಂತಹವರನ್ನು ಒಗ್ಗೂಡಿಸಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಂದಿನ ವಿದ್ಯಾರ್ಥಿಗಳಿಗೂ ಸೇವಾ ಮನೋಭಾವನೆ ಮೂಡುವಂತೆ ಮಾಡಬೇಕಿದೆ ಎಂದರು.
ವಿದ್ಯೆಯನ್ನು ಕಲಿಸಿದ ಗುರುಗಳಿಗೆ ಕೃತಜ್ಞತಾಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.
ವಿಶ್ರಾಂತ ಪ್ರಾಂಶುಪಾಲ ಡಿ.ಎಸ್.ನರಸಿಂಹಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ ಗೂಗಲ್, ಮೊಬೈಲ್ ಸಂಸ್ಕೃತಿ 80ರ ದಶಕದಲ್ಲಿ ಇರಲಿಲ್ಲ. ಆ ದಿನಗಳಲ್ಲಿ ಶಿಕ್ಷಕರು ವಿಷಯಗಳ ಬಗ್ಗೆ ಪರಿಪೂರ್ಣವಾಗಿ ಸಿದ್ಧತೆಗಳನ್ನು ಮಾಡಿಕೊಂಡು ತರಗತಿಗಳಲ್ಲಿ ಪಾಠ ಮಾಡಬೇಕಾದ ಪರಿಸ್ಥಿತಿ ಇತ್ತು. ಪಿಯುಸಿ ಅಂಕಗಳ ಆಧಾರದ ಮೇಲೆಯೇ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪಡೆಯಬಹುದಾಗಿತ್ತು ಎಂದರು.
ವಿದ್ಯಾರ್ಥಿಗಳು ಬರೆಯುವ ಹವ್ಯಾಸವನ್ನು ಉತ್ತಮಪಡಿಸಿಕೊಂಡಲ್ಲಿ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಶಿವಶಂಕರ್, ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಟಿ.ಹೇಮಂತ್ ಕುಮಾರ್, ಪಿ.ಜೆ.ಮೋಹನ್ ಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಎಸ್.ದೇವರಾಜ್, ಟಿ.ಎಸ್.ಶಿವಣ್ಣ, ಡಿ.ಎಸ್.ನರಸಿಂಹಮೂರ್ತಿ, ಜಿ.ಎನ್.ತೋಟಗಿ, ಶೇಖರ್‌ಗೌಡ, ಡಿ.ವಿ.ಮೋಹನ್, ನಿವೃತ್ತ ಉಪನ್ಯಾಸಕರಾದ ಎಂ.ವಿ.ವತ್ಸಲಾ, ವಿ. ಜಯಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕ ಬಿ.ಸಿ.ನಾಗರಾಜೇಗೌಡ, ವೃತ್ತಿ ಶಿಕ್ಷಣ ಶಿಕ್ಷಕ ಎಚ್.ಜೆ.ಚಂದ್ರೇಗೌಡ, ಕಚೇರಿ ಸಹಾಯಕರಾದ ರಾಮಚಂದ್ರ, ಜವರಪ್ಪ, ಗೋಪಾಲ್ ಅವರನ್ನು ಇದೇ ವೇಳೆ ಗೌರವಿಸಲಾಯಿತು.
ಪಿಯು ಕಾಲೇಜಿನಲ್ಲಿ ನೂತನವಾಗಿ ಆರಂಭಗೊಂಡಿರುವ ಕಂಪ್ಯೂಟರ್ ಶಿಕ್ಷಣ ವಿಭಾಗಕ್ಕೆ 6 ಹೊಸ ಕಂಪ್ಯೂಟರ್‌ಗಳನ್ನು ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ನೀಡಲಾಯಿತು.
ಕಾರ್ಯಕ್ರಮಕ್ಕೂ ಮೊದಲು ನಿವೃತ್ತ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಕಚೇರಿ ಸಹಾಯಕರನ್ನು ಸರ್ಕಾರಿ ಪ್ರೌಢಶಾಲಾ ಆವರಣದಿಂದ ಜೂನಿಯರ್ ಕಾಲೇಜ್ ಆವರಣದವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲಾ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಎಸ್.ಜೆ.ಸುರೇಶ್, ನಟರಾಜ್, ಶಂಕರೇಗೌಡ, ರಮೇಶ್, ಮಾಧು ಆಚಾರ್ಯ, ಬಲರಾಮ್ ಸಿಂಗ್, ಬಸವರಾಜ್, ಮಂಜುನಾಥ್, ದೀಕ್ಷಿತ್, ನಜಮ್ ರಝ, ಪಿ.ಕೆ.ಶ್ರೀಧರ್, ಮಹದೇವ್, ಅಫ್ರೋಜ್ ಪಾಷಾ, ಮಂಜು ಕುಮಾರನ್, ಕೆಂಪರಾಜ್, ವೀರೇಶ್, ನಾಗರಾಜ್, ಸಿ.ಎನ್.ವಿಜಯ್, ಮಹಮ್ಮದ್ ಶಫಿ, ಹೊನ್ನಯ್ಯ, ರವಿ, ದೇವಯ್ಯ ಮತ್ತಿತರರಿದ್ದರು.