ನಿರಂತರ ಅಭ್ಯಾಸದಿಂದ ಯಶಸ್ಸು

succuss
Published on
ಅನೇಕ ಬಾರಿ ಏನನ್ನಾದರು ಸಾಧಿಸಬೇಕೆಂದು ನಾವು ಪ್ರಯತ್ನಪಡು ತ್ತೇವೆ. ಆದರೆ ಬಹಳ ಪ್ರಯತ್ನದ ನಂತರವೂ ಯಶಸ್ಸು ಸಿಗದಿರ ಬಹುದು. ಅದರಿಂದ ಹತಾಶರಾಗುವುದು ಸಹಜ. ಹಾಗಾದರೆ ನಮ್ಮ ಪ್ರಯತ್ನದಲ್ಲಿ ಏನಾದರೂ ಕೊರತೆಯಿರಬಹುದೇ? ಇತ್ಯಾದಿ ಹತ್ತು-ಹಲವು ಯೋಚನೆಗಳು ಬರುತ್ತವೆ. ಅದಕ್ಕೆ ಉತ್ತರವಾಗಿ 2500 ವರ್ಷಗಳ ಹಿಂದೆಯೇ ಪತಂಜಲಿ ಮಹಾ ಮುನಿಗಳು ಅಭ್ಯಾಸ ಹೇಗಿದ್ದರೆ ಮಾತ್ರ ನಾವು ಯಶಸ್ಸನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.

ಅದು, - ಸತು ಧೀರ್ಘಕಾಲನೈರಂತರ್ಯಸತ್ಕಾರಾಸೇವಿತೋ ದೃಢಭೂಮಿಃ | ಅಂದರೆ, ದೀರ್ಘಕಾಲ, ನಿರಂತರವಾಗಿ ಹಾಗೂ ಶ್ರದ್ಧೆ ಅಥವಾ ಆದರದಿಂದ ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು. ನಾವು ಯಾವುದೇ ಪ್ರಯತ್ನವನ್ನು ಪ್ರಾರಂಭಿಸಿ, ಕೆಲವು ದಿವಸಗಳಾದ ಮೇಲೆ ನಿಲ್ಲಿಸಬಾರದು. ಹೀಗೆ ಮಾಡುವುದರಿಂದ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಬದಲಾಗಿ ನಾವು ನಮ್ಮ ಗುರಿಯನ್ನು ತಲುಪವವರೆಗೂ ಪ್ರಯತ್ನವನ್ನು ನಿಲ್ಲಿಸಬಾರದು. ಅದು ದೀರ್ಘಕಾಲದಿಂದ ಕೂಡಿರಬೇಕು. ಹಲವು ಬಾರಿ ಅಭ್ಯಾಸ ಮಾಡುವುದು ಮತ್ತು ಕೆಲವು ವಾರಗಳಾದ ಮೇಲೆ ನಿಲ್ಲಿಸುವುದರಿಂದ ಗುರಿಯನ್ನು ಮುಟ್ಟುವುದು ಅಸಾಧ್ಯ. ಅದ್ದರಿಂದ ಅದು ನಿರಂತರವಾಗಿರಬೇಕು. ಬಹಳ ದಿನಗಳಿಂದ, ತಿಂಗಳುಗಳಿಂದ, ನಿರಂತರವಾಗಿ ನಾನೇನೋ ಪ್ರಯತ್ನ ಮಾಡುತ್ತಿದ್ದೇನೆ ಸ್ವಾಮಿ.

ಆದರೂ ನಾನು ನನ್ನ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಗುರಿಯನ್ನು ತಲುಪಿಬಿಡಬೇಕು. ಆಗ ನಾನು ಪ್ರಯತ್ನವನ್ನು ನಿಲ್ಲಿಸಿಬಿಡಬಹುದು. ಏಕೆಂದರೆ ನನಗೆ ಸಾಕಾಗಿದೆ. ಅಂದರೆ ಅವನು ತನ್ನ ಪ್ರಯತ್ನದಲ್ಲಿ ಆನಂದವನ್ನು ಕಾಣುತ್ತಿಲ್ಲ. ಬದಲಾಗಿ ಹೊರೆಯೆಂದು ಭಾವಿಸುತ್ತಿದ್ದಾನೆ. ಗುರಿಯನ್ನು ಸೇರುವಾಗ ನಾವು ಪಯಣಿಸುವ ದಾರಿಯನ್ನು ಅನಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ನಮ್ಮ ಪ್ರಯತ್ನ ಅಥವಾ ಶ್ರಮ ಭಾರವಾಗದು. ಇದನ್ನೇ ಪತಂಜಲಿ ಮುನಿಗಳು ಸತ್ಕಾರಸೇವಿತ ಅಂದರೆ ಆದರದಿಂದ ಮಾಡಲ್ಪಟ್ಟರೆ ಸಾಧ್ಯವಾಗುತ್ತದೆ.ಹೀಗೆ ನಮ್ಮ ಅಭ್ಯಾಸದಲ್ಲಿ ದೀರ್ಘಕಾಲ, ನಿರಂತರ ಮತ್ತು ಆದರ - ಈ ಮೂರು ಅಂಶಗಳು ಸೇರಿದ್ದರೆ ಯಶಸ್ಸು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net