

ಸುಬ್ರಹ್ಮಣ್ಯಸ್ವಾಮಿ ತಾರಕಾಸುರನನ್ನು ಸಂಹಾರ ಮಾಡಿ ವಿಜಯ ಸಾಧಿಸಿದ ದಿನವೇ ಸುಬ್ರಹ್ಮಣ್ಯ ಷಷ್ಠಿ ಅಥವಾ ಚಂಪಾ ಷಷ್ಠಿ. ದೇಶದ ಪ್ರಸಿದ್ಧ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯಂದು (ಡಿ. 7) ಮಹಾ ರಥೋತ್ಸವ ನಡೆಯುತ್ತದೆ.
ಸ್ಕಂದ, ಕಾರ್ತಿಕೇಯ, ಮುರುಗನ್, ಷಣ್ಮುಖ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಶಿವನ ಪುತ್ರ ಸುಬ್ರಹ್ಮಣ್ಯನು ಮಹಾಪರಾಕ್ರಮಿ ಮಾತ್ರವಲ್ಲ ಮಹಾಜ್ಞಾನಿಯೂ ಹೌದು. ಷಣ್ಮುಖನು ಶಿವಧರ್ವೇತ್ತರ ಸಿದ್ಧಾಂತ ಪ್ರತಿಪಾದಿಸಿ ಕೀರ್ತಿಶೇಷನಾಗಿರುವ ಮಹಾನುಭಾವ. ಜಗದೊಡೆಯನಾದ ಮಹಾದೇವನಿಗೆ ಓಂಕಾರ ಬೋಧನೆ ಮಾಡಿದ ಮಹಾಜ್ಞಾನಿ.
ತನ್ನ ಶರೀರದ ತೇಜಸ್ಸಿನಿಂದ ರಾಕ್ಷಸರೆಲ್ಲರನ್ನು ಸಂಹಾರ ಮಾಡುವ ಸಾಮರ್ಥ್ಯವನ್ನು ಹೊಂದಿದ್ದ ಸ್ಕಂದನ ಕುರಿತು ಮಹರ್ಷಿ ವ್ಯಾಸರು ಸ್ಕಂದಪುರಾಣ, ಬ್ರಹ್ಮಾಂಡ ಪುರಾಣ, ವಾಯು ಪುರಾಣ ಮತ್ತು ಮಹಾಭಾರತದ ಅನುಶಾಸನ ಪರ್ವದಲ್ಲಿ ಪ್ರಸಂಗಾನುಸಾರವಾಗಿ ವಿವರಿಸಿದ್ದಾರೆ. ಮಹಾಕವಿ ಕಾಳಿದಾಸನು ಕುಮಾರಸಂಭವ ಮಹಾಕಾವ್ಯದಲ್ಲಿ ಸ್ಕಂದನನ್ನು ವಿಶೇಷವಾಗಿ ವರ್ಣಿಸಿದ್ದಾನೆ. ಕಾರ್ತಿಕೇಯ, ಸೇನಾನಿ, ಪಳನಿಸ್ವಾಮಿ, ಶರಜನ್ಮಾ, ಷಡಾನನ, ಗುಹ, ಶಿಖಿವಾಹನ, ವೇಲಾಯುಧ, ತಾರಕಾರಿ, ಕುಮಾರ, ಷಾಣ್ಮಾತುರ, ಶರವಣ, ಮುರುಗನ್ ಮುಂತಾದ ಅನೇಕ ಹೆಸರುಗಳು ಸ್ಕಂದನ ಪರಾಕ್ರಮ, ವ್ಯಕ್ತಿತ್ವ, ವಿಶೇಷತೆಯನ್ನು ವಿವರಿಸುತ್ತವೆ.
ಭಾರತ ಮಾತ್ರವಲ್ಲದೆ ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ, ಥಾಯ್ಲೆಂಡ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಕೆನಡಾ, ಅಮೆರಿಕದಲ್ಲಿ ಕೂಡ ಸುಬ್ರಹ್ಮಣ್ಯಸ್ವಾಮಿ ದೇವಾಲಯಗಳಿದ್ದು ಅಲ್ಲಿಯೂ ಪಳನಿಸ್ವಾಮಿಯ ಉಪಾಸನೆ ನಡೆಯುತ್ತದೆ. ಸುಬ್ರಹ್ಮಣ್ಯನನ್ನು ಪೂಜಿಸುವುದರಿಂದ ಸಾಂಸಾರಿಕ ಸಮಸ್ಯೆಗಳಾದ ವಧುವರರ ವಿವಾಹ, ವೈವಾಹಿಕ ಜೀವನ, ಸಂತಾನ ಪ್ರಾಪ್ತಿ, ಭೂ ವಿವಾದ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಜನ್ಮ ಜಾತಕದಲ್ಲಿನ ಸರ್ಪದೋಷ, ಕುಜದೋಷಾದಿಗಳ ಪರಿಹಾರಕ್ಕೆ ಸುಬ್ರಹ್ಮಣ್ಯನ ಆರಾಧನೆ ಅಗತ್ಯ ಎಂದು ಜ್ಯೋತಿಷ್ಯ ಶಾಸ್ತ್ರದ ವಿಶ್ಲೇಷಣೆಗಳಿದ್ದು, ನಾಡಿನ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವರ್ಷಪೂರ್ತಿ ಈ ಸಂಬಂಧ ವಿಶೇಷ ಪೂಜಾದಿಗಳು ನಡೆಯುತ್ತವೆ. ಕ್ರಿಕೆಟ್ ತಾರೆಯರು, ಸಿನಿಮಾರಂಗದ ನಟ-ನಟಿಯರು, ವಿವಿಧ ಕ್ಷೇತ್ರದ ಖ್ಯಾತನಾಮರು ಮೇಲಿಂದ ಮೇಲೆ ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಆಗಮಿಸುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ.
ವೀರಶೈವ ಸಿದ್ಧಾಂತದಲ್ಲಿ ಗಣಗೋತ್ರಗಳನ್ನು ಅನುಸರಿಸಲಾಗುತ್ತದೆ. ಇತರ ಜನಾಂಗಗಳಲ್ಲಿ ಋಷಿಗೋತ್ರವಿರುವಂತೆ ವೀರಶೈವರು ದೇವಗೋತ್ರೋತ್ಪನ್ನರೆಂಬ ಪ್ರತಿಪಾದನೆ ಇದೆ. ಅಂತೆಯೇ ವೀರಶೈವರ ಪಂಚ ಗೋತ್ರ ಪುರುಷರಲ್ಲಿ ಸ್ಕಂದನು ಕೂಡ ಓರ್ವ. ವೀರಭದ್ರ, ನಂದಿ, ಭೃಂಗಿ, ವೃಷಭ ಹಾಗೂ ಸ್ಕಂದ ಈ ಐವರು ಕ್ರಮವಾಗಿ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶೀ ಮಹಾ ಪೀಠದ ಗೋತ್ರಪುರುಷರಾಗಿ ವೀರಶೈವರಿಗೆ ಪೂಜ್ಯರಾಗಿದ್ದಾರೆ. ಜ್ಞಾನ ಸಿಂಹಾಸನ ಎಂದೇ ಪ್ರಸಿದ್ಧವಾಗಿರುವ ಕಾಶಿ ಪೀಠಕ್ಕೆ ಮಹಾಜ್ಞಾನಿಯೇ ಆಗಿರುವ ಸ್ಕಂದನೇ ಗೋತ್ರಪುರುಷನಾಗಿದ್ದಾನೆ. ಇಂದಿಗೂ ಕಾಶೀ ಪೀಠದಲ್ಲಿ ಸ್ಕಂದ ಷಷ್ಠಿಯನ್ನು ಸಪ್ತಾಹ ಪರ್ಯಂತ ಆಚರಿಸಲಾಗುತ್ತದೆ.
ತಾರಕಾಸುರನು ಶಿವಸುತನಿಂದಲೇ ತನಗೆ ಮರಣ ಬರಬೇಕೆಂದು ಬೇಡಿಕೊಂಡಿದ್ದರಿಂದ ಸ್ಕಂದನ ಅವತಾರವಾಗಿದ್ದು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ತಾರಕಾಸುರನನ್ನು ಸಂಹಾರ ಮಾಡಿದ್ದರಿಂದ ಇದು ಸುಬ್ರಹ್ಮಣ್ಯನ ವಿಜಯ ದಿವಸವಾಗಿ ಸ್ಕಂದ ಷಷ್ಠಿ ಎಂದು ಪ್ರಸಿದ್ಧಿಯಾಗಿದೆ.
ಉತ್ತರಪ್ರದೇಶ, ಬಿಹಾರ ಇತ್ಯಾದಿ ಉತ್ತರ ಭಾರತದ ರಾಜ್ಯಗಳಲ್ಲಿ ಕಾರ್ತಿಕ ಷಷ್ಠಿಯನ್ನು ಸ್ಕಂದ ಷಷ್ಠಿ ಎಂದು ಆಚರಿಸುತ್ತಾರೆ. ಆದರೆ ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಮಾರ್ಗಶಿರ ಷಷ್ಠಿಯನ್ನು ಸುಬ್ರಹ್ಮಣ್ಯ ಷಷ್ಠಿ ಎಂದು ಆಚರಿಸಲಾಗುತ್ತದೆ. ಅದೇನೇ ಇದ್ದರೂ ಜಾತಿ, ಮತ, ಧರ್ಮ ಪಂಥಗಳ ಭೇದ ಭಾವವಿಲ್ಲದೆ ಸರ್ವರೂ ಸ್ಕಂದನ ಉಪಾಸನೆ ಮಾಡುತ್ತಾರೆ.
ತಾರಕಾಸುರನನ್ನು ಸಂಹರಿಸಿದ ಸುಬ್ರಹ್ಮಣ್ಯ ತನ್ನ ಖಡ್ಗವನ್ನು ಕುಮಾರಧಾರ ನದಿಯಲ್ಲಿ ತೊಳೆದನೆಂದು, ನಂತರ ನಾಗಕುಲ ಸಂರಕ್ಷಣೆಗಾಗಿ ತಪಸ್ಸು ಮಾಡಿದ ವಾಸುಕಿಯ ಕೋರಿಕೆಯಂತೆ ಕುಮಾರಪರ್ವತದ ತಪ್ಪಲಲ್ಲಿ ನೆಲೆನಿಂತಿದ್ದು, ಆ ಕಾರಣಕ್ಕಾಗಿಯೇ ಈ ಸ್ಥಳ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧವಾಗಿದೆ ಎಂದು ಪೌರಾಣಿಕ ಕತೆಗಳಲ್ಲಿ ಉಲ್ಲೇಖವಾಗಿದೆ. ದೇಶದ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾರ್ಗಶಿರ ಷಷ್ಠಿಯಂದು (ಡಿ. 7) ಚಂಪಾಷಷ್ಠಿ ಮಹೋತ್ಸವ, ಮಹಾರಥೋತ್ಸವಾದಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ನೀಡುವ ಆದಿಸುಬ್ರಮಣ್ಯ ಸ್ವಾಮಿಯ ಮೂಲ ಮೃತ್ತಿಕೆ ಪ್ರಸಾದಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.