

ದೋಹ, ಕತಾರ್: ದೆಹಲಿ ಸಾರ್ವಜನಿಕ ಶಾಲೆಯ ಸಭಾಂಗಣದಲ್ಲಿ ಬಂಟರ ಸಂಘ ಏರ್ಪಡಿಸಿದ್ದ ಬಂಟೋತ್ಸವ 2023 ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ‘ಸೇವಾ ಸಂಪದ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ಈ ಸೇವಾ ಸಂಪದ ಪ್ರಶಸ್ತಿಯು ಬಂಟ್ಸ್ ಸಂಘವು ಕತಾರ್ ದೇಶದಲ್ಲಿ ಪ್ರತಿ ವರ್ಷ ಸಮಾಜಕ್ಕೆ ಅತ್ಯುನ್ನತ ಸೇವೆಯನ್ನು ನೀಡುತ್ತಾ ಬಂದಿರುವ ಗಣ್ಯರಿಗೆ ನೀಡಿ ಗೌರವಿಸುತ್ತಿದೆ. ಕತಾರ್‌ನ ಭಾರತೀಯ ಸಮುದಾಯದಲ್ಲಿ ಈ ಪ್ರಶಸ್ತಿಗೆ ತನ್ನದೇ ಆದ ಸ್ಥಾನಮಾನಗಳಿವೆ. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಸುಮಾರು 8 ವರ್ಷಗಳ ತಮ್ಮ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕತಾರ್‌ನಲ್ಲಿ ಕರೊನಾ ಹಾವಳಿ ಇದ್ದಾಗ ಅವಶ್ಯಕತೆ ಇರುವ ಜನರಿಗೆ ಅನ್ನಾಹಾರ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಇರುವವರಿಗೆ ‘ವಂದೇ ಭಾರತ್’ ಸೇವೆಯಡಿ ತಾಯ್ನಡಿಗೆ ವಿಮಾನಯಾನದ ವ್ಯವಸ್ಥೆಯನ್ನು ಕಲ್ಪಿಸಿಕೊಡುವಲ್ಲಿ ಮಹತ್ತರ ಕೊಡುಗೆಯನ್ನು ಸುಬ್ರಮಣ್ಯ ಹೆಬ್ಬಾಗಿಲು ನೀಡಿದ್ದಾರೆ.