

‘ಪೂಜ್ಯ ಕೆ.ಎಸ್. ನಾರಾಯಣಾಚಾರ್ಯರು ಅಸ್ತಂಗತರಾದರು’ ಎಂಬ ಸುದ್ದಿಯೇ ಅಕ್ಷರಶಃ ‘ತುಂಬಲಾರದ ನಷ್ಟ’ ಎಂದು ನನಗನಿಸಿತು. ಮಹಾಭಾರತದ ಆದಿಪರ್ವದ ವ್ಯಕ್ತಿತ್ವಗಳೇ ಮುಂದಿನ ಮಹಾಭಾರತ ಯುದ್ಧಕ್ಕೆ ನಾಂದಿ ಹಾಡಿದ್ದವು. ಮಹಾಭಾರತ ಕಥೆ ಮಾತ್ರ ಓದಿದವರಿಗೆ, ಆ ಪಾತ್ರಗಳ ಹಿನ್ನೆಲೆ ಅರ್ಥವಾಗದು, ಅವುಗಳ ಮರ್ಮದ ಅರಿವಿಗೆ ವೇದಗಳನ್ನೇ ಓದಬೇಕು- ಎಂಬುದು ಆಚಾರ್ಯರ ಸ್ಪಷ್ಟ ನಿಲುವು. ಹಾಗಾಗಿಯೇ, ಕರೊನಾ ಕಾಲದಲ್ಲಿ ಟಿವಿಯಲ್ಲಿ ಮರುಪ್ರಸಾರಗೊಂಡ ಮಹಾಭಾರತ ಧಾರಾವಾಹಿಯನ್ನು ವೀಕ್ಷಿಸುವಾಗ ಅದು ಮತ್ತಷ್ಟು ಸ್ಪಷ್ಟವಾಗಿ, ಕನ್ನಡದಲ್ಲಿ ಮಹಾಭಾರತ ಬರೆದ ವಿದ್ವಾಂಸರೆಲ್ಲ ಆದಿಪರ್ವದ ಕಥೆಗಳನ್ನು ಸಂಕ್ಷಿಪ್ತವಾಗಿಸಿ, ತೇಲಿಸಿ, ದಾಟಿಸಿದ ಒಗಟಿಗೆ ಅವರಿಗೆ ಉತ್ತರ ದೊರೆತಿತ್ತು.
ಆದಿಪರ್ವದ ಕಥಾನಕ ಆರಂಭಿಸಿಯೇ ಬಿಟ್ಟರು. ಆರು ತಿಂಗಳಲ್ಲಿ ಸರ್ಪಯಾಗ, ಉರ್ವಶೀ - ಪುರೂರವ, ನಹುಷ, ಯಯಾತಿ- ಕಾದಂಬರಿಗಳನ್ನು ಬರೆದು ಪ್ರಕಟಗೊಂಡದ್ದು ಭರ್ಜರಿ ಮಾರಾಟವೂ ಮುಗಿದು, ಮುಂದಿನ ‘ಭರತ ವಂಶಾವಳಿ’ ಎಂಬ 60 ಅಧ್ಯಾಯಗಳ ಮತ್ತು ಆ ಮಾಲೆಯ ಕೊನೆಯ ವೃತ್ತಾಂತದ ಬರವಣಿಗೆ ಆರಂಭಿಸಿಬಿಟ್ಟರು. ‘ಇವತ್ತಿಗೆ 15 ಅಧ್ಯಾಯಗಳು ಮುಗಿದುವಪ್ಪಾ, ನಾಳೆ ಮೈಸೂರಿಗೆ ಹೋಗಿ ಮತ್ತೆ ಬರವಣಿಗೆ ಆರಂಭಿಸುತ್ತೇನೆ’ ಅಂದವರು ‘17 ಅಧ್ಯಾಯ ಮುಗಿದವಪ್ಪ’ ಎಂದು ಫೋನಿನಲ್ಲಿ ಸಂತೋಷ ಹಂಚಿಕೊಂಡರು. ಧಿಗ್ಗನೆ ಅನಾರೋಗ್ಯ ಕಾಣಿಸಿ, ಆಸ್ಪತ್ರೆ, ಚಿಕಿತ್ಸೆ, ವಿರಾಮ ಎಂಬೆಲ್ಲ ಶಿಕ್ಷೆಗಳನ್ನು ಅನುಭವಿಸಿದರು. ಈಗ ನಾಲ್ಕೇ ದಿನಗಳ ಹಿಂದೆ ಅವರ ಭೇಟಿಗಾಗಿಯೂ ಮಗಳ ಮದುವೆಗೆ ಆಶೀರ್ವಾದ ಪಡೆಯಲು ಸಂಸಾರ ಸಮೇತ ಹೋದವನಿಗೆ ಅವರ ಮುಕ್ಕಾಲು ಗಂಟೆಯ ಲವಲವಿಕೆಯ ಮಾತು, ಧ್ವನಿಗಳೇ ಕೊನೆಯಾದಾವೆಂಬ ಕಲ್ಪನೆಯೇ ಇರಲಿಲ್ಲ. ಮಗಳಿಗೆ-ಸೊಸೆಗೆ ಆಶೀರ್ವಾದವೆಂದು ಜೋರು ಮಾಡಿ ಉಂಗುರಗಳನ್ನು ತೊಡಿಸಿ ‘ಕೊನೆಗಾಲದಲ್ಲಿ ಏನನ್ನೂ ಇಟ್ಟುಕೊಳ್ಳಬಾರದಪ್ಪ- ಆಪ್ತೇಷ್ಟರಿಗೆ ಕೊಟ್ಟು ಈ ಭೂಮಿಯ ಋಣವನ್ನು ತೀರಿಸಬೇಕು’ ಎಂದಾಗ ನನಗೆ ಕಣ್ಣೀರುಧಾರೆ. ‘ಯಾಕೆ ಅಳ್ತೀರಿ?’ ಎಂಬ ಜಬರದಸ್ತ್ ಧ್ವನಿ ಅವರಿಂದ.
ಎರಡು ದಿನದ ಹಿಂದೆ ಫೋನ್ ಮಾಡಿ- ‘ಧಾರವಾಡದಲ್ಲಿ ಹಿಂದಿ ಚಿತ್ರತಾರೆ ಒಬ್ಬರಿದ್ದರು, ನೆನಪಿದೆಯೇ?’ ಎಂದರು. ‘ಲೀನಾ ಚಂದಾವರಕರ’ ಎಂದೆ. ‘ಹೌದೂ, ಅವಳ ಆತ್ಮಕಥೆ ಓದಬೇಕೆನಿಸಿದೆಯಪ್ಪ, ನನಗೆ ಬೇಗ ದೊರಕುವ ವ್ಯವಸ್ಥೆ ಮಾಡಿ’ ಎಂದರು. ಜ್ಞಾನಸಾಗರವೇ, ಜ್ಞಾನನಿಧಿಯೇ ಆದ ಆಚಾರ್ಯರು ಅನಾರೋಗ್ಯದ ಸ್ಥಿತಿಯಲ್ಲಿಯೂ ಜ್ಞಾನದಾಹ ತೊರೆದಿಲ್ಲವಲ್ಲ ಎಂಬ ಆಶ್ಚರ್ಯವೂ ಉಂಟಾಯಿತು.
ಅವರ ಪ್ರವಚನಗಳನ್ನು ಮುಂದಿನ ಸಾಲಿನಲ್ಲಿ ಕುಳಿತು ಕೇಳುತ್ತಿದ್ದ ಬೇಂದ್ರೆಯವರೇ ಇವರನ್ನು ಲೇಖಕರನ್ನಾಗಿಸಿದರು. ಅವರ ಮಹಾಭಾರತ, ರಾಮಾಯಣ ಆಧಾರಿತ ಕಥಾನಕಗಳ ಓದುಗರು, ಪತ್ರಿಕೆಗಳ ಅಂಕಣಗಳ ಓದುಗರು ಇವತ್ತು ಲಕ್ಷ, ಲಕ್ಷ ಜನ. ವೇದ, ಉಪನಿಷತ್ತು, ಸಂಸ್ಕೃತಿ, ಇತಿಹಾಸ, ಸಂಶೋಧನೆಗಳೆಲ್ಲದರ ಒಗಟನ್ನು ಬಿಡಿಸಿ, ತಿಳಿಹೇಳುವ ವಿದ್ವತ್ತು, ಜ್ಞಾನಸಂಪತ್ತು ಅವರದ್ದು.
ಭರತ ವಂಶಾವಳಿಯ ಮುಂದಿನ 40 ಅಧ್ಯಾಯಗಳನ್ನು ಇವರಂತೆ ಬರೆದು ತಿಳಿಸಬಲ್ಲವರು ಈಗ ಯಾರು? ಅದುವೇ ಅಕ್ಷರಶಃ ‘ತುಂಬಲಾರದ ನಷ್ಟ!’ ಇಪ್ಪತೆôದು ವರ್ಷಗಳ ಹಿಂದೆ ಆರಂಭವಾದ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮತ್ತು ಧಾರವಾಡದ ಕೆ.ಎಸ್. ನಾರಾಯಣಾಚಾರ್ಯರ ನಡುವಿನ ಬೆಸುಗೆ ಎಂದೂ ಕಳಚದ ಬಾಂಧವ್ಯವಾಯಿತು. ಸಾಹಿತ್ಯ ಪ್ರಕಾಶನಕ್ಕೆ ಘನತೆ ಬಂದುದೇ ತಮ್ಮ ಪುಸ್ತಕಗಳ ಪ್ರಕಟಣೆಯಿಂದ ಎಂದಾಗಲೆಲ್ಲ, ‘ಇಲ್ಲಪ್ಪ ನೀವು ಸಿಕ್ಕಿರದಿದ್ದರೆ, ನಾನು ಇಷ್ಟು ಬರೆಯಲು ಸಾಧ್ಯವಿತ್ತ?’ ಎಂಬ ಮರುಪ್ರಶ್ನೆ. ವರ್ಷಕ್ಕೆ 35 ಲಕ್ಷ ರೂಪಾಯಿಗೂ ಮೀರಿದ ಅವರ ಕೃತಿಗಳ ಮಾರಾಟ. ಇದು ಕನ್ನಡದ ಕೆಲವೇ ಲೇಖಕರಿಗೆ ದಕ್ಕಿದ ಭಾಗ್ಯ. ಆದರೂ, ಲೇಖಕರನ್ನು ಗುರುತಿಸಿ ಮನ್ನಣೆ ನೀಡುವವರೆಲ್ಲ ಆಚಾರ್ಯರ ಕುರಿತು ಕುರುಡಾಗಿದ್ದರಲ್ಲ, ಏಕೆ? ಎಂಬ ಓದುಗರ ಪ್ರಶ್ನೆಗೆ ಉತ್ತರ ಮತ್ತೆ ಅದೇ- ‘ಜ್ಞಾನಶಿಖರದ ಉತ್ತುಂಗ ಅವರು’ ಎಂಬುದು!