ಲಸಿಕೆಗೂ ಹೆದರದ ಉಪತಳಿ; ದಕ್ಷಿಣ ಆಫ್ರಿಕಾ ವಿಜ್ಞಾನಿಗಳಿಂದ ಅಧ್ಯಯನ..

vaccine
Published on

ನವದೆಹಲಿ: ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಈ ತಿಂಗಳು ಪತ್ತೆ ಮಾಡಿರುವ ಒಮಿಕ್ರಾನ್ ವೈರಸ್​ನ ಹೊಸ ಉಪತಳಿಗಳು ಲಸಿಕೆಗಳು ಹಾಗೂ ನೈಸರ್ಗಿಕ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಂಭವವಿದೆ ಎಂದು ದಕ್ಷಿಣ ಆಫ್ರಿಕಾದ ತಜ್ಞ, ವೈರಸ್ ಪ್ರಭೇದಗಳ ಅಧ್ಯಯನ ನಡೆಸಿದ ಜೀನ್ ಸೀಕ್ವೆನ್ಸಿಂಗ್ ಘಟಕಗಳ ಮುಖ್ಯಸ್ಥ ತುಲಿಯೋ ಡೆ ಒಲಿವೆರಾ ಹೇಳಿದ್ದಾರೆ. ಬಿಎ.4 ಮತ್ತು ಬಿಎ.5 ಉಪ-ತಳಿಗಳು ಹಿಂದಿನ ಬಿಎ.2 ಉಪ-ಪ್ರಭೇದಕ್ಕಿಂತ ಹೆಚ್ಚು ಸೋಂಕುಕಾರಕ ಎಂದು ಕ್ವಾಝುುಲು-ನಟಾಲ್ ಮತ್ತು ಸ್ಟೆಲೆನ್​ಬಾಷ್ ವಿಶ್ವವಿದ್ಯಾಲಯಗಳ ಸಂಸ್ಥೆಗಳ ಮುಖ್ಯಸ್ಥರಾಗಿರುವ ಒಲಿವೆರಾ ತಿಳಿಸಿದ್ದಾರೆ. ಬಿಎ.2 ಉಪ-ತಳಿಯು ಮೂಲ ಒಮಿಕ್ರಾನ್ ತಳಿಗಿಂತ ಅಧಿಕ ಸೋಂಕುಕಾರಕವಾಗಿದೆ.

ದೇಶದಲ್ಲಿ ಕರೊನಾ ಏರಿಕೆ: ಭಾರತದಲ್ಲಿ ಕೋವಿಡ್ ಸೋಂಕಿನಲ್ಲಿ ತುಸು ಏರಿಕೆಯಾಗಿದ್ದು ಶನಿವಾರ 3,688 ಹೊಸ ಪ್ರಕರಣಗಳು ದೃಢಪಟ್ಟಿವೆ. 50 ಜನರು ಮೃತಪಟ್ಟಿದ್ದಾರೆ. ದೇಶದ ಕರೊನಾ ಸೋಂಕಿತರ ಒಟ್ಟು ಸಂಖ್ಯೆ 4,30,75,864 ಹಾಗೂ ಮರಣಿಸಿದವರ ಸಂಖ್ಯೆ 5,23,803ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18,684ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಚೇತರಿಕೆ ದರ ಶೇಕಡ 98.74 ಆಗಿದೆ. ದೈನಿಕ ಪಾಸಿಟಿವಿಟಿ ದರ ಶೇ. 0.74 ಹಾಗೂ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 0.66 ಆಗಿದೆ.

ನೆಗೆಟಿವ್ ವರದಿ ಕಡ್ಡಾಯವಲ್ಲ: ಪ್ರಖ್ಯಾತ ಚಾರ್​ಧಾಮ್ ಯಾತ್ರೆ ಮೇ 3ರಂದು ಆರಂಭವಾಗಲಿದ್ದು ಉತ್ತರಾಖಂಡ ಸರ್ಕಾರ ಯಾತ್ರಾರ್ಥಿಗಳಿಗಾಗಿ ಮಾರ್ಗಸೂಚಿ ಪ್ರಕಟಿಸಿದೆ. ಎಲ್ಲ ಯಾತ್ರಾರ್ಥಿಗಳು ಆಗಮನಕ್ಕೂ ಮುನ್ನವೇ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪೋರ್ಟಲ್​ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವಂತೆ ಅದು ಸೂಚಿಸಿದೆ. ಆದರೆ, ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಮತ್ತು ಲಸಿಕೆ ಪ್ರಮಾಣ ಪತ್ರವನ್ನು ಸರ್ಕಾರ ಕಡ್ಡಾಯಗೊಳಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net