

ನವದೆಹಲಿ: ಈಗ ದೇಶದೆಲ್ಲೆಡೆ ಕರೊನಾ ಲಸಿಕೆಯದ್ದೇ ಸದ್ದು. ಕೊವ್ಯಾಕ್ಸಿನ್ ತೆಗೆದುಕೊಳ್ಳಲೋ, ಕೋವಿಶೀಲ್ಡ್ ಹಾಕಿಸಿಕೊಳ್ಳಲೋ ಎಂದು ಜನರು ಇತ್ತೀಚಿನವರೆಗೂ ಯೋಚಿಸುತ್ತಲೇ ಇದ್ದರು. ಕೊವ್ಯಾಕ್ಸಿನ್ ಲಭ್ಯತೆ ಕಡಿಮೆಯಾದ ಕಾರಣ ಈಗ ಅನಿವಾರ್ಯವಾಗಿ ಕೋವಿಶೀಲ್ಡ್ ಹಾಕಿಕೊಳ್ಳಲು ನಾಮುಂದು ತಾಮುಂದು ಎಂದು ಧಾವಿಸುತ್ತಿದ್ದಾರೆ. ಆದರೆ ಅವರ್ಯಾರಿಗೂ ಕೊವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್ ಉತ್ತಮ ಎಂಬ ಅಂಶ ಗೊತ್ತಿಲ್ಲ ಎನ್ನಿಸುತ್ತದೆ.
ಇತ್ತೀಚೆಗಷ್ಟೆ ನಡೆಸಲಾದ ಅಧ್ಯಯನವೊಂದರಲ್ಲಿ, ಕೊವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್ ಉತ್ತಮ ಎಂಬ ಅಂಶ ದೃಢಪಟ್ಟಿದೆ. ‘ಕೋವಿಶೀಲ್ಡ್ ಲಸಿಕೆಯು ಫಲಾನುಭವಿಯ ದೇಹದಲ್ಲಿ ಕೊವ್ಯಾಕ್ಸಿನ್‌ಗಿಂತ ಅಧಿಕ ಪ್ರತಿಕಾಯ (ಆ್ಯಂಟಿಬಾಡಿ) ಉತ್ಪಾದಿಸುತ್ತದೆ’ ಎಂಬುದನ್ನು ಆರಂಭಿಕ ಅಧ್ಯಯನ ದೃಢಪಡಿಸಿದೆ. ಕರೊನಾ ವೈರಸ್ ವ್ಯಾಕ್ಸಿನ್-ಇಂಡ್ಯೂಸ್ಡ್ ಆ್ಯಂಟಿಬಾಡಿ ಟೈಟ್ರ್ (ಕೊವಾಟ್) ಶೀರ್ಷಿಕೆಯ ಈ ಅಧ್ಯಯನದಲ್ಲಿ ಆರೋಗ್ಯಸೇವಾ ಕಾರ್ಯಕರ್ತರು ಒಳಗೊಂಡಿದ್ದರು.
ಅವರು ಎರಡೂ ವ್ಯಾಕ್ಸಿನ್‌ಗಳ ಪೈಕಿ ಯಾವುದಾದರೂ ಒಂದರ ಉಭಯ ಡೋಸ್ ಪಡೆದಿದ್ದರು. ಕೋವಿಶೀಲ್ಡ್‌ನ ಮೊದಲ ಲಸಿಕೆ ಪಡೆದವರಲ್ಲಿ ಆ್ಯಂಟಿ-ಸ್ಪೈಕ್ ಪ್ರತಿಕಾಯದ ಸೆರೊಪಾಸಿಟಿವಿಟಿ ದರ ಕೊವ್ಯಾಕ್ಸಿನ್‌ಗಿಂತ ಹೆಚ್ಚು ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನ ವರದಿಯನ್ನು ತಜ್ಞರು ಇನ್ನೂ ಪರಿಶೀಲಿಸಿ ಅಂಗೀಕರಿಸಿಲ್ಲ. ಹೀಗಾಗಿ ಅದನ್ನು ಕ್ಲಿನಿಕಲ್ ಪ್ರಾಕ್ಟೀಸ್‌ಗೆ ಗೈಡ್ ಆಗಿ ಬಳಸುವಂತಿಲ್ಲ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ಉಭಯ ಡೋಸ್‌ನ ನಂತರ ಉತ್ತಮ ಪ್ರತಿಕ್ರಿಯೆ ತೋರಿಸಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಪರಿಣಾಮಕಾರಿಯಾಗಿವೆ. ಆದರೆ, ಸೆರೊಪಾಸಿಟಿವಿಟಿ ಮತ್ತು ಮೀಡಿಯನ್ ಆ್ಯಂಟಿ-ಸ್ಪೈಕ್ ಪ್ರತಿಕಾಯ ಕೋವಿಶೀಲ್ಡ್‌ನಲ್ಲಿ ಅಧಿಕ ಎಂದು ಅಧ್ಯಯನ ಹೇಳಿದೆ.