ಅಂಕಪಟ್ಟಿ ಸಿಗದೆ ವಿದ್ಯಾರ್ಥಿಗಳ ಪರದಾಟ

Published on

ಹೊಳೆನರಸೀಪುರ: ಪದವಿಯಲ್ಲಿ ಉತ್ತೀರ್ಣರಾದ ಬಹುತೇಕ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಅಂಕಪಟ್ಟಿ ಹಾಗೂ ಘಟಿಕೋತ್ಸವ ಪ್ರಮಾಣಪತ್ರ ನೀಡದ ಹಿನ್ನೆಲೆಯಲ್ಲಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಮೈಸೂರು ವಿವಿಯ ವಿದ್ಯಾರ್ಥಿಗಳು ದೂರಿದ್ದಾರೆ.

ಕೆಲವು ವಿದ್ಯಾರ್ಥಿಗಳು ವಿಜಯವಾಣಿಯೊಂದಿಗೆ ಮಾತನಾಡಿ, ಅಂಕಪಟ್ಟಿಗಳನ್ನು ಪಡೆದುಕೊಳ್ಳಲು ನಾವು ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ಹತ್ತಾರು ಬಾರಿ ಅಲೆದಾಡಿದರೂ ಅಂಕಪಟ್ಟಿ ಸಿಕ್ಕಿಲ್ಲ. ಅಂಕಪಟ್ಟಿ ಕಳುಹಿಸುವಂತೆ ಮೈಸೂರು ವಿವಿಗೆ ಹತ್ತಾರು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ನೀಡುತಿಲ್ಲ. ಗ್ರಾಮೀಣ ಪ್ರದೇಶದಿಂದ ಬರುವ ನಾವು ಅಂಕಪಟ್ಟಿ ಪಡೆದುಕೊಳ್ಳಲು ಕಾಲೇಜು, ಮೈಸೂರು ವಿಶ್ವವಿದ್ಯಾಲಯಕ್ಕೆ ಹತ್ತಾರು ಬಾರಿ ಅಲೆೆದು ಸಾಕಾಗಿದೆ. ರಾಜ್ಯಪಾಲರಿಗೆ, ಶಿಕ್ಷಣ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ದೂರು ನೀಡಿ ಕಾಲೇಜುಗಳ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮೈಸೂರು ವಿವಿಯಲ್ಲಿ ಅಂಕಪಟ್ಟಿಗಳನ್ನು ಡಿಜಿ ಲಾಕರ್ ಮೂಲಕ ಪಡೆದುಕೊಳ್ಳುವ ವ್ಯವಸ್ಥೆಯನ್ನು 2021-22ನೇ ಸಾಲಿನಿಂದ ಮಾಡುತ್ತಿದ್ದರೂ ಇನ್ನು ಪರಿಪೂರ್ಣವಾಗಿಲ್ಲ. ವಿದ್ಯಾರ್ಥಿಗಳಿಗೆ ಯುಯುಸಿಎಂಎಸ್‌ನಲ್ಲಿ ಅಂಕಗಳನ್ನು ಡೌನ್‌ಲೋಡ್ ಮಾಡಿಕೊಂಡು ಬರುವ ವಿದ್ಯಾರ್ಥಿಗಳಿಗೆ ಸಹಿಮಾಡಿ ಕೊಡುತ್ತಿದ್ದೇವೆ. ಈ ಅಂಕಪಟ್ಟಿಗಳು ಕೆಲವು ಪದವಿಗಳಿಗೆ ಪ್ರವೇಶ ಪಡೆಯಲು ಉಪಯೋಗವಾಗುತ್ತದೆ. ಆದರೆ ಬಿಎಡ್, ಎಂ.ಬಿ.ಎ ಸೇರಿದಂತೆ ಇನ್ನು ಕೆಲವು ಕೋರ್ಸ್‌ಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ನಾವು ನೀಡುವ ಅಂಕಗಳ ವಿವರದ ಪಟ್ಟಿಗೆ ಯೂನಿವರ್ಸಿಟಿ ರಿಜಿಸ್ಟ್ರಾರ್ ಅವರಿಂದ ಸಹಿಮಾಡಿಸಿಕೊಳ್ಳಬೇಕು. ಕೆಲವು ವಿದ್ಯಾರ್ಥಿಗಳು ಮೈಸೂರು ವಿಶ್ವ ವಿದ್ಯಾಲಯಕ್ಕೆ ಅನೇಕ ಬಾರಿ ಅಲೆದರೂ ಸಹಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಎಂದು ಹೆಸರು ಇಚ್ಛಿಸದ ಪ್ರಾಂಶುಪಾಲರೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸ್ನೇಹಿ ಆಗಿರಬೇಕಿತ್ತು. ಆದರೆ ಅಲ್ಲಿನ ವಾತಾವರಣ ವಿದ್ಯಾರ್ಥಿ ಸ್ನೇಹಿ ಆಗಿಲ್ಲ. ಡಿಜಿ ಲಾಕರ್ ಸೌಲಭ್ಯದ ನಿರ್ವಹಣೆಯನ್ನು ನ್ಯಾಡ್ ಎಂಬ ಹೆಸರಿನ ನಿರ್ವಹಣಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇವರ ಲೋಪದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪದವಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಅಲೆದಾಡುವಂತಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net