ಶಿಕ್ಷಕನ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು, ಪಾಲಕರ ಪ್ರತಿಭಟನೆ

12blrp1
ಬೇಲೂರು ತಾಲೂಕಿನ ಅಮ್ಮನ ಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ತೀರ್ಥಕುಮಾರ್ ವರ್ಗಾವಣೆ ಖಂಡಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಪಾಲಕರು.
Published on

ಬೇಲೂರು: ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ನಿರ್ವಹಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದ ಶಿಕ್ಷಕ ತೀರ್ಥಕುಮಾರ್ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ತಾಲೂಕಿನ ಅಮ್ಮನ ಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮತ್ತು ಪಾಲಕರು ಶಾಲಾ ಕಟ್ಟಡದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

ಅಮ್ಮನ ಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಹಾಗೂ ಸದಸ್ಯ ಲೋಕೇಶ್ ಮಾತನಾಡಿ, ಅಮ್ಮನ ಬ್ಯಾಡರಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 100 ಕುಟುಂಬಗಳು ವಾಸಿಸುತ್ತಿವೆ. ಜತೆಗೆ ಹಿಂದಿನಿಂದಲೂ ಸರ್ಕಾರಿ ಶಾಲೆ ಉಳಿಸಬೇಕೆಂದು ಮನೆ ಮನೆಗೆ ತೆರಳಿ 14 ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವಂತೆ ಮಾಡಿದ್ದೇವೆ. ಇಲ್ಲಿರುವ ಜಯಪ್ರಕಾಶ್ ಮತ್ತು ತೀರ್ಥಕುಮಾರ್ ಕೆಲಸ ನಿರ್ವಹಿಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅಲ್ಲದೆ ಮಕ್ಕಳಿಗೆ ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ ಸೇರಿದಂತೆ ಇತರ ಚಟುವಟಿಕೆಯಲ್ಲೂ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿರುವುದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಂದರ್ಭ ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಮಾನದಂಡವೆಂದು ಶಿಕ್ಷಕ ತೀರ್ಥಕುಮಾರ್ ವರ್ಗಾವಣೆಗೆ ಮುಂದಾಗಿರುವುದು ಸರಿಯಲ್ಲ. ತಕ್ಷಣವೇ ತೀರ್ಥಕುಮಾರ್ ಅವರನ್ನು ಇಲ್ಲಿಯೇ ಉಳಿಸಬೇಕು. ಇಲ್ಲದಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಾಲಕರಾದ ಹೇಮಾ ಮಾತನಾಡಿ, ಶಿಕ್ಷಕ ತೀರ್ಥಕುಮಾರ್ ನಮ್ಮ ಶಾಲೆಗೆ ಬಂದ ದಿನದಿಂದ ಮಕ್ಕಳ ಕಲಿಕೆಯಲ್ಲಿ ಪ್ರಗತಿಯಾಗಿದೆ. ವಿವಿಧ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿ, ಬುದ್ಧಿವಂತರಾಗಿಸಿದ್ದಾರೆ. ಆದರೆ ಅವರನ್ನು ವರ್ಗಾವಣೆ ಮಾಡಿರುವುದರಿಂದ ಎರಡು ದಿನದಿಂದ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮೊದಲೇ ನಮ್ಮ ಗ್ರಾಮ ಕಾಡಿನ ನಡುವೆ ಇದೆ. ಮಕ್ಕಳ ಹಿತದೃಷ್ಟಿಯಿಂದ ಉತ್ತಮವಾಗಿ ಕೆಲಸ ಮಾಡುವ ಶಿಕ್ಷಕ ತೀರ್ಥಕುಮಾರ್ ಅವರನ್ನು ಇಲ್ಲಿಯೇ ಉಳಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಪಾಲಕರಾದ ಧರ್ಮನಾಯಕ್, ಸಂತೋಷ್, ಪ್ರಕಾಶ್, ಶಿವಶಂಕರ್, ಚಂದ್ರನಾಯಕ್, ತೀರ್ಥಕುಮಾರಿ, ಧನುಷ್, ಲಕ್ಷಮ್ಮ, ಸುಂದರಮ್ಮ, ಪಾರ್ವತಮ್ಮ, ತುಂಗಮ್ಮ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net