ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ

srb
ಸೊರಬ ಪಟ್ಟಣದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಕ್ರವವನ್ನು ಡಾ. ಎಚ್.ಇ.ಜ್ಞಾನೇಶ್ ಉದ್ಘಾಟಿಸಿದರು. ಎಂ.ಆರ್.ಪಾಟೀಲ್, ಸುಧೀರ್, ಸುರ್ವಣಾ ರಾಜಪ್ಪ, ಮಧುರಾಯ್ ಶೇಟ್ ಇತರರಿದ್ದರು.
Published on

ಸೊರಬ: ವಿದ್ಯಾರ್ಥಿಗಳಿಗೆ ಸಂವಿಧಾನ ಹಾಗೂ ಕಾನೂನು ಅರಿವು ಮೂಡಬೇಕಾದರೆ ಶಾಲಾ ಕಾಲೇಜು ಮಟ್ಟದಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.

ಪಟ್ಟಣದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ದೇಶವನ್ನು ನಕ್ಷೆ ಅಥವಾ ಭೌಗೋಳಿಕವಾಗಿ ತಿಳಿದುಕೊಳ್ಳುವುದು ಮುಖ್ಯವಲ್ಲ. ಆ ದೇಶದ ಸಂವಿಧಾನವು ಅಲ್ಲಿನ ಜನರ ಸಾಮಾಜಿಕ ಸ್ಥಿತಿಗತಿಗೆ ಅನುಗುಣವಾಗಿ ಹೇಗೆ ಬದುಕಿಗೆ ನೆರವಾಗಿದೆ ಎನ್ನುವುದು ಮುಖ್ಯ ಎಂದರು.

ಪುರಾಣ ಹಾಗೂ ವೈಜ್ಞಾನಿಕ ತಳಹದಿ ಮೇಲೆ ದೇಶದ ಇತಿಹಾಸವನ್ನು ನೋಡಿದಾಗ ಭಾರತವು ಹಲವು ಗಣಗಳಾಗಿ ವಿಭಜಿಸಿತ್ತು. ಕಾಲಾನಂತರದಲ್ಲಿ ದೇಶಕ್ಕೆ ಸಾರ್ವಭೌಮತ್ವ ದೊರೆತಿದ್ದು ಮೌರ್ಯರ ಕಾಲದಲ್ಲಿ ಎಂದು ತಿಳಿಸಿದರು.

ರಾಜಾಶ್ರಯದಲ್ಲಿ ಸಾಮಾನ್ಯ ಜನರ ಬದುಕು, ಬವಣೆ ಮತ್ತು ಆ ಸಂದರ್ಭದಲ್ಲಿ ರೈತರು ಬೆಳೆದ ದವಸ, ಧಾನ್ಯಗಳನ್ನು ಕಳ್ಳರಿಂದ ರಕ್ಷಿಸುವ ಹೊಣೆಗಾರಿಕೆ ರಾಜನ ಹೆಗಲ ಮೇಲೆ ಬಿದ್ದಾಗ ಕಾನೂನು ರೂಪಿಸಲು ಮುಂದಾದ. ಆದರೆ ಅವನ ಪ್ರಭುತ್ವದ ಅಂಕುಶದಲ್ಲಿದ್ದ ಆಜ್ಞೆ (ಕಾನೂನು)ಜನರಿಗೆ ಹಿಂಸೆ ರೂಪಕ್ಕೆ ತಿರುಗಿತು. ಈ ರೀತಿಯ ರಾಜ ಪ್ರಭುತ್ವದ ಸಂಕೋಲೆಯಿಂದ ಜನರು ನೆಮ್ಮದಿ ಬದುಕು ನಡೆಸಲು ಪ್ರಜಾಪ್ರಭುತ್ವ ಸ್ಥಾಪಿಸಲಾಯಿತು ಎಂದು ತಿಳಿಸಿದರು.

ಹಿರಿಯ ವಕೀಲ ಎಂ.ಆರ್.ಪಾಟೀಲ್, ಉಪನ್ಯಾಸಕ ಸುಧೀರ್, ಪ್ರಭಾರ ಪ್ರಾಚಾರ್ಯೆ ಸುವರ್ಣಾ ರಾಜಪ್ಪ, ಪುರಸಭೆ ಸದಸ್ಯ ಮಧುರಾಯ್ ಶೇಟ್, ಮಹಾಂತೇಶ್, ಡಾ. ದೀಪಕ್, ಶೇಖರಪ್ಪ, ಆಶಿಕ್, ಸುದೀಪ್ ತನುಜಾ, ಭೂಮಿಕಾ, ದಿವ್ಯಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net