ಆಹ್ವಾನವಿಲ್ಲದಿದ್ದರೂ ಮದುವೆ ಮನೆಗೆ ವಿದ್ಯಾರ್ಥಿಗಳ Gatecrash; ಮುಂದೇನಾಯ್ತು ನೀವೇ ನೋಡಿ

GateCrash
Published on

ಲಖನೌ: ಇತ್ತೀಚಿನ ವರ್ಷಗಳಲ್ಲಿ  ಕ್ಷುಲಕ ಕಾರಣಗಳಿಗೆ ಮದುವೆ ಮನೆಗಳಲ್ಲಿ ಗಲಾಟೆಗಳಾಗಿರುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಈ ಪೈಕಿ ಕೆಲವೊಬ್ಬರು ಆಹ್ವಾನವಿಲ್ಲದೇ (Gatecrash) ಮದುವೆ ಇತರೆ ಕಾರ್ಯಕ್ರಮಗಳಿಗೆ ಹೋಗಿ ಭರ್ಜರಿ ಊಟವನ್ನು ಮಾಡಿಬರುತ್ತಾರೆ. ಇನ್ನೂ ಕೆಲವರು ಸುಖಾಸುಮ್ಮನೆ ದಾಂಧಲೆ ಮಾಡಿ ಬರುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಲಖನೌನಲ್ಲಿ ನಡೆದಿದ್ದು, ಕ್ಷಣಾರ್ಧದಲ್ಲೇ ಮದುವೆಮನೆ ರಣರಂಗವಾಗಿದೆ.

ಲಖನೌನ ಹಸನ್‌ಗಂಜ್‌ ಪ್ರದೇಶದಲ್ಲಿರುವ ರಮಾದಿನ್​ ಮ್ಯಾರೇಜ್‌ ಲಾನ್‌ನಲ್ಲಿ ಈ ಘಟನೆ ನಡೆದಿದ್ದು, ಆಹ್ವಾನವಿಲ್ಲದೇ ಮದುವೆಮನೆಗೆ ತೆರಳಿದ್ದ ವಿದ್ಯಾರ್ಥಿಗಳು  ಅಥಿತಿಗಳ ಮೇಲೆ ಕಲ್ಲು ಮತ್ತು ಕಚ್ಚಾ ಬಾಂಬ್‌ ಎಸೆದು ಮದುವೆಮನೆಯಲ್ಲಿ ದಾಂಧಲೆ ನಡೆಸಿದ್ಧಾರೆ. ಘಟನೆ ಸಂಬಂಧ ಪೊಲೀಸರು 150 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಮನೀಷಾ ಸಿಂಗ್​, ಸುಮಾರು 150 ವಿದ್ಯಾರ್ಥಿಗಳು ಏಕಾಏಕಿ ಮದುವೆ ಮನೆಗೆ ನುಗ್ಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಅತಿಥಿಗಳು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ಶುರುವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವಿದ್ಯಾರ್ಥಿಗಳು ಅಲ್ಲಿದ್ದವರ ಮೇಲೆ ಹಲ್ಲೆ ಮಾಡಿ ಮದುವೆ ಮನೆಯಲ್ಲಿ ಕಚ್ಚಾಬಾಂಬ್​ಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ.  ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಮನೀಷಾ ಸಿಂಗ್ ತಿಳಿಸಿದ್ಧಾರೆ.

ಈ ಬಗ್ಗೆ ಮಾತನಾಡಿರುವ ವರನ ತಂದೆ ರಿಂಕು ಸೋಂಕರ್‌, 3,000 ಜನರಿಗೆ ಭೋಜನವನ್ನು ಸಿದ್ಧಪಡಿಸಲಾಗಿದ್ದರೂ, ಗೊಂದಲದಿಂದಾಗಿ ಯಾರು ಇದನ್ನು ತಿನ್ನಲು ಸಾಧ್ಯವಾಗಲಿಲ್ಲ. ಮದುವೆಗೆ ಬಂದ ಅತಿಥಿಗಳು ಊಟ ಮಾಡದೆ ಹೋಗಿದ್ದಾರೆ. ಸುಮಾರು 150 ವಿದ್ಯಾರ್ಥಿಗಳು ಆಹ್ವಾನವಿಲ್ಲದೆ ಮದುವೆಗೆ ಬಂದಿದ್ದು, ಇವರುಗಳು ದಾಂಧಲೆ ನಡೆಸಿದ ಪರಿಣಾಮ ಈ ರೀತಿಯಾಗಿದೆ. ಭದ್ರತೆ ನಡುವೆ ಮದುವೆ ನಡೆದಿದ್ದು, ಊಟ ಮಾಡದೆ ಹೋಗಿರುವ ವಿಚಾರ ನಗೆ ಬೇಜಾರಾಗುತ್ತಿದೆ ಎಂದು ವರನ ತಂದೆ ರಿಂಕು ಸೋಂಕರ್‌ ಬೇಸರ ಹೊರಹಾಕಿದ್ದಾರೆ.

2 ವರ್ಷ ಜೈಲು 

ಆಹ್ವಾನವಿಲ್ಲದಿರುವ ಮದುವೆ, ಪಾರ್ಟಿ ಇತ್ಯಾದಿ ಖಾಸಗಿ ಕಾರ್ಯಕ್ರಮಗಳಿಗೆ ಹೋಗೋದು ಖಂಡಿತವಾಗಿಯೂ ಒಂದು ಅಪರಾಧ. ಇದನ್ನು ʼಗೇಟ್ ಕ್ರ್ಯಾಶ್ʼ ಅಂತ  ಕರೆಯಲಾಗುತ್ತದೆ. ಆಹ್ವಾನವಿಲ್ಲದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಕ್ಕಿಬಿದ್ರೆ, ನಿಮ್ಮನ್ನು  ಸೆಕ್ಷನ್ 442  ಮತ್ತು ಸೆಕ್ಷನ್ 452 ಇಂಡಿಯನ್ ಪಿನಲ್ ಕೋಡ್ ಪ್ರಕಾರ ಪೋಲಿಸರು ನಿಮ್ಮನ್ನು ಅರೆಸ್ಟ್ ಕೂಡಾ ಮಾಡಬಹುದು. ಅಲ್ಲದೆ  ಈ ಒಂದು ತಪ್ಪಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net