

ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲು ಸಿದ್ಧ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವರು (Dinesh Gundurao), ಬಾಣಂತಿಯರ ಸಾವು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರದಲ್ಲಿ ಪ್ರತಿಪಕ್ಷಗಳ ಸಹಕಾರವೂ ನಮಗೆ ಅಗತ್ಯ. ಇದು ಜೀವಕ್ಕೆ ಸಂಬಂಧಿಸಿದ ವಿಚಾರ. ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಈ ವರ್ಷ ರಾಜ್ಯದಲ್ಲಿ 327 ಮೆಟರ್ನಲ್ ಸಾವಾಗಿದೆ. ಎಲ್ಲವನ್ನೂ ಪರಿಶೀಲಿಸಿ ಅಂತ ಹೇಳಿದ್ದೇವೆ. ಇಂತಹ ಪ್ರಕರಣಗಳಲ್ಲಿ ಸಹನೆ ಇರಬಾರದು, ಕಠಿಣ ಕಾನೂನು ಕ್ರಮ ಆಗಬೇಕು. ಮೊನ್ನೆ ಬಳ್ಳಾರಿಯಲ್ಲಿ 9 ಜನರಿಗೆ ಸಮಸ್ಯೆ ಆಗಿತ್ತು, ನಾಲ್ವರು ಮೃತಪಟ್ಟಿದ್ದಾರೆ. ಐದನೇಯವರು ಚಿಕಿತ್ಸೆ ಪಡಿಯುತ್ತಿದ್ದರು. ಈಗ ಅವರೂ ತೀರಿಕೊಂಡಿದ್ದಾರೆ. ಅವರಿಗೆ ಅದೇ ಬ್ಯಾಚ್ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಈಗಾಗಲೇ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಆದರೆ ಇವರಿಗೆ ಬೇರೆ ಆರೋಗ್ಯ ಸಮಸ್ಯೆಯೂ ಇತ್ತು. ಅವರು ಗುಣಮುಖರಾಗುತ್ತಾರೆ ಎಂದು ವೈದ್ಯರು ಹೇಳಿದ್ದರು. ಆದರೆ ನಿನ್ನೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿತ್ತು.
ಈ ವಿಚಾರವಾಗಿ ಬಿಜೆಪಿಯವರು ಖಂಡಿತವಾಗಿಯೂ ಲೋಕಾಯುಕ್ತಕ್ಕೆ ದೂರು ನೀಡಲಿ. ನನ್ನ ರಾಜೀನಾಮೆಯಿಂದ ಸರಿಯಾಗುತ್ತದೆ ಎಂಬುದೇ ಆದರೆ ನಾನು ಅದಕ್ಕೂ ಸಿದ್ಧ. ಇದರಲ್ಲಿ ನನ್ನ ಪ್ರತಿಷ್ಠೆ ಏನಿಲ್ಲ. ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ನಾನು ಸಿದ್ಧ. ಇನ್ಮುಂದೆ ಇಂತಹ ಘಟನೆಗಳು ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ಧಾರೆ.