ಪ್ರಧಾನಿ ಮೋದಿ ಕಲಿತ ಶಾಲೆಗೆ ಅಧ್ಯಯನ ಪ್ರವಾಸ; ಪ್ರತಿ ಜಿಲ್ಲೆಯಿಂದ 2 ವಿದ್ಯಾರ್ಥಿಗಳಿಗೆ ಅವಕಾಶ!

Modi School
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ಕಲಿತ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿರುವ ಪ್ರಾಥಮಿಕ ಶಾಲೆಗೆ ಮುಂದಿನ ವರ್ಷದಿಂದ ಭಾರತದ ಪ್ರತಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳನ್ನು ಒಂದು ವಾರದ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.

ಯೋಜನೆಯ ಕುರಿತು ಘೋಷಣೆ ಮಾಡಿರುವ ಕೇಂದ್ರ ಸರ್ಕಾರ, ‘Prerna: The Vernacular School’ ಎಂಬ ಉಲ್ಲೇಖದಡಿಯಲ್ಲಿ ಮೋದಿ ಕಲಿತ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ವಿಕಸನಗೊಂಡ ಜೀವನದಲ್ಲಿ ಹೇಗೆ ಬದುಕಬಹುದು ಎಂಬ ಅಂಶವನ್ನು ಅರಿತುಕೊಳ್ಳುತ್ತಾರೆ. ಅಂತೆಯೇ ವಿದ್ಯಾರ್ಥಿಗಳಿಗೆ ಈ ಕುರಿತು ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದೆ.

19ನೇ ಶತಮಾನದ ಕೊನೆಯಲ್ಲಿ ನಿರ್ಮಾಣವಾದ ಈ ಶಾಲೆ 2018ರವರೆಗೆ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಶಾಲೆಯನ್ನು ವಡ್ನನಗರದ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಪುನಃಸ್ಥಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

750 ಜಿಲ್ಲೆಗಳಿಂದ ಇಬ್ಬರು ವಿದ್ಯಾರ್ಥಿಗಳು

ಭಾರತದಲ್ಲಿ ಒಟ್ಟು 750 ಜಿಲ್ಲೆಗಳಿದ್ದು, ಪ್ರತಿ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಮೋದಿ ಕಲಿತ ಶಾಲೆಗೆ ಭೇಟಿ ನೀಡಲಿದ್ದಾರೆ. ಒಂದು ವರ್ಷದಲ್ಲಿ ಒಟ್ಟು 1,500 ವಿದ್ಯಾರ್ಥಿಗಳು ಯೋಜನೆಯ ಭಾಗವಾಗಿ ವಿಕಸನಗೊಂಡ ಜೀವನವನ್ನು ಹೇಗೆ ನಡೆಸುವುದು ಎಂಬುದರ ಕುರಿತು ತರಬೇತಿ ಪಡೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಯೋಜನೆಯ ಬಗ್ಗೆ ಅಂತಿಮ ರೂಪುರೇಷೆಗಳು ಅಂತಿಮಗೊಂಡಿಲ್ಲ. 9-10 ನೇ ತರಗತಿಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಆಯ್ಕೆ ಪ್ರಕ್ರೀಯ ಆರಂಭವಾಗಲಿದ್ದು, ಇದಕ್ಕಾಗಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ, ಸೃಜನಶೀಲತೆ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಪರೀಕ್ಷಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net