

ಶಿವಮೊಗ್ಗ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ಸಿಮ್ಸ್ ಸಹ ಪ್ರಾಧ್ಯಾಪಕನನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ.
ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ದೂರು ನೀಡಿ ನಂತರ ಹಿಂತೆಗೆದುಕೊಂಡಿದ್ದರು. ಆದರೆ ಕೆಲ ಸಂಘಟನೆಗಳು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರನ್ನು ಭೇಟಿ ಮಾಡಿ ವಿಚಾರಣೆಗೆ ಆದೇಶ ಮಾಡಬೇಕು ಹಾಗೂ ವಿದ್ಯಾರ್ಥಿನಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದರು.
ಜು.15ರಂದು ಉತ್ತರ ಭಾರತ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ ಐದೂವರೆ ವರ್ಷದ ವ್ಯಾಸಂಗ ಮುಗಿಸಿ ಎನ್‌ಒಸಿ(ನಿರಾಪೇಕ್ಷಣಾ ಪ್ರಮಾಣಪತ್ರ) ಪಡೆಯಲು ಸಿಮ್ಸ್‌ಗೆ ಬಂದಿದ್ದರು. ಅಂದು ಒಪಿಡಿ ವಿಭಾಗಕ್ಕೆ ತೆರಳಿದ್ದ ವಿದ್ಯಾರ್ಥಿನಿಗೆ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಸಹಕರಿಸುವಂತೆ ಹೇಳಿದ್ದ ಎನ್ನಲಾಗಿದ್ದು ವಿದ್ಯಾರ್ಥಿನಿ ಸಹ ಪ್ರಾಧ್ಯಾಪಕರ ವಿರುದ್ಧ ಸಿಮ್ಸ್ ನಿರ್ದೇಶಕ ಡಾ. ಒ.ಎಸ್.ಸಿದ್ದಪ್ಪ ಅವರಿಗೆ ಲೈಂಗಿಕ ಕಿರುಕುಳ ದೂರು ನೀಡಿದ್ದರು.
ನಿರ್ದೇಶಕ ಡಾ. ಒ.ಎಸ್.ಸಿದ್ದಪ್ಪ ಅವರು ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸಿಮ್ಸ್‌ನ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವ ವಿಭಾಗಕ್ಕೆ ಶಿಫಾರಸು ಮಾಡಿದ್ದರು. ಆದರೆ ವಿದ್ಯಾರ್ಥಿನಿಯನ್ನು ಕರೆಸಿ ವಿಚಾರಣೆ ಮಾಡದೆಯೇ ಆಕೆ ತಪ್ಪು ಗ್ರಹಿಕೆಯಿಂದ ಸಹ ಪ್ರಾಧ್ಯಾಪಕನ ಮೇಲೆ ದೂರು ನೀಡಿದ್ದಾಳೆ ಎಂದು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಸಲಾಗಿತ್ತು. ದೂರು ಅರ್ಜಿಯನ್ನು ಬೇಷರತ್ತಾಗಿ ಹಿಂಪಡೆಯುತ್ತೇನೆಂದು ಸಮಿತಿ ಮುಂದೆ ಹೇಳಿಕೆ ನೀಡಿದ್ದು ಈ ಹೇಳಿಕೆಯನ್ನು ಪಡೆದ ಸಮಿತಿ ಸಿಮ್ಸ್ ನಿರ್ದೇಶಕರ ಮುಂದೆ ಶಿಫಾರಸು ಮಾಡಿದೆ ಎಂದು ಅದಕ್ಕೆ ಪೂರಕವಾಗಿ ನಿರ್ದೇಶಕ ಡಾ. ಒ.ಎಸ್.ಸಿದ್ದಪ್ಪ ಅವರು ತಿಳಿಸಿದ್ದರು.
ಆದರೆ ಸಿಮ್ಸ್ ಆಡಳಿತ ಮಂಡಳಿಯ ತೀರ್ಮಾನಕ್ಕೆ ಅಸಮಾಧಾನಗೊಂಡ ವಿದ್ಯಾರ್ಥಿನಿ ಇತ್ತೀಚೆಗೆ ವಿವಿಧ ಪ್ರಗತಿಪರ ಹೋರಾಟಗಾರರ ಜತೆಗೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರಿಗೆ ದೂರು ನೀಡಿದ್ದರು. ಅಲ್ಲದೆ ಪ್ರಕರಣದ ಕುರಿತು ತಾವೇ ತನಿಖೆ ನಡೆಸಿ ತಪ್ಪಿತಸ್ಥರ ಸಹ ಪ್ರಾಧ್ಯಾಪಕನ ಮೇಲೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.
ಮನವಿ ಸ್ವೀಕರಿಸಿದ ಮರುದಿನವೇ ಸಿಮ್ಸ್‌ನಲ್ಲಿ ಆಡಳಿತ ಮಂಡಳಿ ಸಭೆ ನಡೆಸಿದ್ದ ಡಿಸಿ ಡಾ. ಆರ್.ಸೆಲ್ವಮಣಿ, ಎಲ್ಲರ ಹೇಳಿಕೆ ಸಂಗ್ರಹಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸಮಗ್ರವಾಗಿ ಪತ್ರ ಬರೆದು ಮಾಹಿತಿ ನೀಡಿದ್ದರು. ಇದಾದ ಒಂದೇ ದಿನದಲ್ಲೇ ಸಹ ಪ್ರಾಧ್ಯಾಪಕನನ್ನು ಅಮಾನತ್ತಿನಲ್ಲಿಟ್ಟು ಇಲಾಖಾ ತನಿಖೆಗೆ ಒಳಪಡಿಸುವಂತೆ ಆದೇಶಿಸಲಾಗಿದೆ.