ನೋಡ ನೋಡುತ್ತಿದ್ದಂತೆ ಕಟ್ಟಡ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ | Student Death

ವಿಜಯವಾಣಿ - 2025-01-23T194154.782
Published on

Student Suicide: ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ಶಿಕ್ಷಕರು ಹೇಳಿಕೊಡುತ್ತಿದ್ದ ಪಾಠದ ನಡುವೆಯೇ ತರಗತಿಯಿಂದ ಓಡಿಹೋಗಿ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಾರಾಯಣ ಕಾಲೇಜಿನಲ್ಲಿ ಸಂಭವಿಸಿದೆ.

ಎಲ್ಲಾ ವಿದ್ಯಾರ್ಥಿಗಳಂತೆ ತಾನು ಕೂಡ ತರಗತಿಯಲ್ಲಿ ಪಾಠ ಕೇಳುತ್ತ ಕೂತಿದ್ದ ವಿದ್ಯಾರ್ಥಿ ದಿಢೀರ್​ ಹೊರನಡೆದು 3ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ಸ್ಥಳೀಯರನ್ನು ಭಾರೀ ಅನುಮಾನಕ್ಕೆ ದೂಡಿದೆ. ಇಂದು (ಜ.23) ಬೆಳಗ್ಗೆ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಂಕ್ರಾಂತಿ ರಜೆ ಮುಗಿಸಿಕೊಂಡು ಕಾಲೇಜಿಗೆ ಬಂದ ಕೆಲವೇ ಸಮಯದಲ್ಲಿ ವಿದ್ಯಾರ್ಥಿ ಜಿಗಿದು ಸಾವಿಗೀಡಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ.

ಬಾಲಕ ತರಗತಿಯಿಂದ ಹೊರಗೆ ಓಡಿಬಂದು ಕಟ್ಟೆಯ ಮೇಲಿನಿಂದ ಜಿಗಿದ ದೃಶ್ಯ ಮೂರನೇ ಮಹಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಟ್ಟಲಪಲ್ಲಿ ಮಂಡಲದ ರಾಮಪುರಂ ನಿವಾಸಿಯಾದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಅಸಲಿಗೆ ವಿದ್ಯಾರ್ಥಿಯ ಸಾವಿನ ಹಿಂದಿರುವ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಆತನ ಆತ್ಮಹತ್ಯೆಗೆ ಕಾಲೇಜು ಆಡಳಿತ ಮಂಡಳಿಯೇ ಕಾರಣ ಎಂದು ಎಸ್​ಎಫ್​ಐ ಪ್ರತಿಭಟಿಸಿದೆ.

"ವಿದ್ಯಾರ್ಥಿ ಸಾವಿಗೆ ಕಾಲೇಜು ಆಡಳಿತ ಮಂಡಳಿ ನೇರ ಹೊಣೆ. ಘಟನೆಯ ಸುತ್ತಲಿನ ಸತ್ಯಗಳನ್ನು ಮರೆಮಾಚಲು ಮತ್ತು ನಿಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಯ ರಕ್ತದ ಕಲೆಗಳನ್ನು ತೊಳೆಯಲು ಇವರು ಮುಂದಾಗಿದ್ದಾರೆ" ಎಂದು ಭಾರತೀಯ ವಿದ್ಯಾರ್ಥಿ ಒಕ್ಕೂಟ (SFI) ನಾಯಕರು ಗಂಭೀರ ಆರೋಪ ಎಸಗಿದ್ದಾರೆ. ಘಟನೆಯ ಸುತ್ತಲಿನ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net