ಪರೀಕ್ಷೆಯಲ್ಲಿ ವಿದ್ಯಾರ್ಥಿ ಬರೆದ ಒಂದೇ ಒಂದು ಡೈಲಾಗ್​ಗೆ ಫುಲ್​ ಮಾರ್ಕ್ಸ್​ ಕೊಟ್ಟ ಶಿಕ್ಷಕ! ಅಸಲಿಗೆ ಆತ ಬರೆದಿದ್ದೇ... | Full Marks

ವಿಜಯವಾಣಿ - 2025-02-10T175905.540
Published on

Full Marks: ಕಾಲೇಜಿನಲ್ಲಿ ಎನ್ನುವದಕ್ಕಿಂತ ಶಾಲೆಯಲ್ಲಿ ಕೊಡುತ್ತಿದ್ದ ಪರೀಕ್ಷೆಗಳು ನಿಜಕ್ಕೂ ನಮ್ಮಲ್ಲಿ ಬೆವರಿಳಿಸುತ್ತಿತ್ತು. ಪರೀಕ್ಷೆ ಎಂಬ ಪದ ಕೇಳಿದ್ರೆ ನಮ್ಮ ಎದೆಯಲ್ಲಿ ಒಂದು ನಡುಕ ಉಂಟಾಗುತ್ತಿತ್ತು. ಪರೀಕ್ಷೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಎಂದರೆ ಸಾಕು ಅದೇನೋ ಆತಂಕ, ಭಯದ ಭೀತಿ ಆವರಿಸುತ್ತಿತ್ತು. ನಾವು ಓದಿರುವ, ಅಭ್ಯಾಸ ಮಾಡಿರುವ ಪ್ರಶ್ನೆಯೇ ಪತ್ರಿಕೆಯಲ್ಲಿ ಬರಲಿದೆಯೇ? ಎಂಬ ಚಿಂತೆ ಎಕ್ಸಾಂ ಹಾಲ್​ಗೆ ಹೋಗುವವರೆಗೂ ಕಾಡುತ್ತಿತ್ತು. ಬೆಲ್ ಹೊಡೆದ ನಂತರ ಕೈಗೆ ಬಂದ ಪ್ರಶ್ನೆ ಪತ್ರಿಕೆಯಲ್ಲಿ ನಮಗೆ ಗೊತ್ತಿರದ ಪ್ರಶ್ನೆಗಳು ಬಂದಿದ್ದರೆ, ಅಲ್ಲಿಗೆ ನಮ್ಮ ಅಂಕಗಳ ಕಥೆ ಕಣ್ಣೀರಿನ ವ್ಯಥೆ.

ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಪ್ರಶ್ನಾವಳಿಗಳು ನಮಗೆ ಗೊತ್ತಿಲ್ಲ ಎಂದಾದರೆ ನಾವು ಕಂಡುಕೊಳ್ಳುವ ಉಪಾಯವೇ ನಮ್ಮದೇ ಆದ ಉತ್ತರ. ಕೊಟ್ಟಿರುವ ಉತ್ತರ ಹಾಳೆಯಲ್ಲಿ ಏನಾದರೂ ತುಂಬಲೇಬೇಕು. ಇಲ್ಲವಾದಲ್ಲಿ ತರಗತಿಯಲ್ಲಿರುವ ಸರ್​ ಅಥವಾ ಮೇಡಂ ನಗುತ್ತಾರೆ, ಇಲ್ಲವೇ ನಮ್ಮ ಮುಖವನ್ನೇ ದಿಟ್ಟಿಸಿ ನೋಡುತ್ತಾರೆ. ಇಂತಹ ಅನುಭವ ತೀರ ಮುಜುಗರ. ಕೆಲವರು ಇದನ್ನು ಎದುರಿಸಲಾಗದೆ, ಏನೂ ಗೊತ್ತಿಲ್ಲದಿದ್ದರೂ, ನನಗೇನೋ ಗೊತ್ತಿದೆ ಎನ್ನುವಂತೆ ಪೆನ್ ಹಿಡಿದು ಬರೆಯಲು ಶುರುಮಾಡಿ, ಉತ್ತರ ಪತ್ರಿಕೆಯನ್ನು ತುಂಬಿಸುತ್ತಾರೆ. ಅಲ್ಲಿ ಬರೆಯುವುದು ಮನಸ್ಸಿಗೆ ಬಂದದ್ದು, ಕೈಗೆ ತೋಚಿದ್ದಷ್ಟೇ. ಕೆಲವೊಮ್ಮೆ ಕೊನೆಯ ಸಾಲಿನಲ್ಲಿ ದೇವರ ಹೆಸರು ಬರೆದಿರುವುದು ಇತಿಹಾಸವೇ ನಿಜ.

ಈ ಸಾಲಿಗೆ ಇಲ್ಲೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆ ಕೂಡ ಸೇರ್ಪಡೆಗೊಂಡಿದೆ. ಆಸಕ್ತಿದಾಯಕ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿಕ್ಷಕರನ್ನು ಮತ್ತು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ತನಗೆ ಗೊತ್ತಿಲ್ಲದ ಪ್ರಶ್ನೆಗೆ ಕೆಲವರು ಕವಿತೆ, ಕಾದಂಬರಿ ಬರೆಯುತ್ತಾರೆ. ಇನ್ನೂ ಕೆಲವರು ಸಿನಿಮಾ ಡೈಲಾಗ್​ ಬರೆದು ಶಿಕ್ಷಕರನ್ನು ಅಚ್ಚರಿಗೆ ದೂಡುತ್ತಾರೆ. ಈ ವಿದ್ಯಾರ್ಥಿ ಸಹ ಅದನ್ನೇ ಮಾಡಿದ್ದು, ಶಿಕ್ಷಕರಿಂದ ಬೈಗುಳ ಪಡೆಯದೆ 80ಕ್ಕೆ 80 ಅಂಕ ಪಡೆದಿರುವುದು ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ತನ್ನ ಉತ್ತರ ಪತ್ರಿಕೆಯಲ್ಲಿ ಜನಪ್ರಿಯ ಚಿತ್ರವೊಂದರ ಸಂಭಾಷಣೆಯನ್ನು ಬರೆದ ವಿದ್ಯಾರ್ಥಿ, ಶಿಕ್ಷಕನ ಗಮನ ಸೆಳದಿದ್ದಾನೆ. ಪತ್ರಿಕೆಯನ್ನು ನೋಡಿದ ಶಿಕ್ಷಕ ಮೊದಲು ಅಚ್ಚರಿಗೆ ಒಳಗಾಗಿ, ನಂತರದಲ್ಲಿ ಅಂಕ ಕೊಡುತ್ತ ಹಾಳೆ ತಿರುಗಿಸಿದ್ದಾರೆ. ಆಗ ಆ ಹುಡುಗ ಬರೆದ, "ನೀನು ಸೋಲಲಿ ಎಂದು​ ಎಲ್ಲರೂ ಕಾಯುತ್ತಿರುವಾಗ, ನೀನು ಗೆದ್ದರೇ, ಆಗ ಆಗುವ ಸಂತೋಷವೇ ಬೇರೆ" ಎಂಬ ಡೈಲಾಗ್​ ನೋಡಿ 80ಕ್ಕೆ 80 ಅಂಕ ಕೊಡುವ ಮೂಲಕ ತಮ್ಮ ಸಂತಸವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ನಗೆಗಡಲಿಗೂ ಕಾರಣವಾಗಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net