

ರಾಣೆಬೆನ್ನೂರ: ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಿಂದ ಪ್ರಕಟವಾಗುವ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಯನ್ನು ಓದಿ ಅದರಿಂದ ನಾವು ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅಂಥ ವಿದ್ಯಾರ್ಥಿಗಳಿಗೆ ಉಚಿತವಾಗಿ ಯುಪಿಎಸ್‌ಇ ಸೇರಿ ಎಲ್ಲ ರೀತಿಯ ಕೋಚಿಂಗ್‌ಗಳನ್ನು ಕೊಡಲಾಗುವುದು ಎಂದು ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ರಾಜ ರಾಜೇಶ್ವರಿ ಪಿಯು ಕಾಲೇಜ್‌ನಲ್ಲಿ ಗುರುವಾರ ವಿದ್ಯಾರ್ಥಿನಿಯರಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ಇಂದಿನ ದಿನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಮೇಲುಗೈ ಸಾಧಿಸಬೇಕು ಎಂದರೆ ಸ್ಫರ್ಧಾತ್ಮಕ ಪರೀಕ್ಷೆ ಎದುರಿಸಲೇಬೇಕು. ಇಂಥ ಪರೀಕ್ಷೆ ಎದುರಿಸಲು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಯಲ್ಲಿನ ವಿಷಯಗಳು ಸಹಕಾರಿಯಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ನಿತ್ಯವೂ ಪತ್ರಿಕೆಯಲ್ಲಿ ಬರುವ ವಿಷಯಗಳನ್ನು ಅಧ್ಯಯನ ಮಾಡಬೇಕು. ಪತ್ರಿಕೆಯಲ್ಲಿನ ವಿಷಯ ಆಧರಿಸಿ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಉಚಿತ ಕೋಚಿಂಗ್ ಕೊಡಲಾಗುವುದು ಎಂದು ಭರವಸೆ ನೀಡಿದರು.
ವಿದ್ಯಾರ್ಥಿನಿಯರು 22 ಅಥವಾ 23 ವಯಸ್ಸಿನಲ್ಲಿಯೆ ಸರ್ಕಾರಿ ಉದ್ಯೋಗ ಪಡೆಯಬೇಕು. ಅದಕ್ಕಾಗಿ ಈಗಿನಿಂದಲೇ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಕೆಎಎಸ್, ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಲು ಹೈದರಾಬಾದ್, ದೆಹಲಿಗೆ ಹೋಗಬೇಕು ಎನ್ನುವ ವಿಚಾರ ದೂರ ಮಾಡಿ. ಇಲ್ಲಿಯೆ ದೊರೆಯುವ ಪುಸ್ತಕಗಳನ್ನು ಸರಿಯಾಗಿ ಅಧ್ಯಯನ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಟಾಪರ್ ಆಗಲು ಸಾಧ್ಯವಿದೆ.
ಶೈಕ್ಷಣಿಕದ ಜತೆಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಬೇಕು. ನಮ್ಮ ಠಾಣೆಗೆ ಬಂದವರಿಗೆ ಉಚಿತವಾಗಿ ಸಸಿಗಳನ್ನು ಕೊಡಲಾಗುತ್ತಿದೆ. ನೀವು ಕೂಡ ಬಂದು ಸಸಿ ತೆಗೆದುಕೊಂಡು ಹೋಗಿ ಅದನ್ನು ಬೆಳೆಸುವ ಜವಾಬ್ದಾರಿ ಹೊತ್ತುಕೊಳ್ಳಿ. ಇಂಥ ಕಾರ್ಯದಿಂದ ಪರಿಸರ ಸಂರಕ್ಷಣೆ ಕೇವಲ ಮಾತಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಲಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದ ಮಹಾರಾಜ್ ಮಾತನಾಡಿ, ಪೊಲೀಸ್ ಕರ್ತವ್ಯದ ಜತೆಗೆ ಸಾಮಾಜಿಕ ಕಾಳಜಿಯಿಂದ ಮಕ್ಕಳಿಗೆ ಪತ್ರಿಕೆ ಕೊಡುವುದು, ಸಸಿ ನೆಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸುಖಕರ ಜೀವನಕ್ಕೆ ಗುರಿ ಮುಖ್ಯವಲ್ಲ. ಜ್ಞಾನ ಮುಖ್ಯವಾಗಿದೆ. ಆದ್ದರಿಂದ ಮಕ್ಕಳು ಪತ್ರಿಕೆ ಓದುವುದು ಸೇರಿ ಪ್ರತಿಯೊಂದು ಕ್ಷೇತ್ರದಿಂದ ಜ್ಞಾನ ಪಡೆದುಕೊಳ್ಳಬೇಕು. ಇದರಿಂದ ಉನ್ನತ ಹುದ್ದೆ ಅಲಂಕರಿಸಿ ಸುಖ ಜೀವನ ಸಾಗಿಸಲು ಸಾಧ್ಯವಿದೆ ಎಂದರು.
ಕಾಲೇಜ್‌ನ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್ ಆಡಳಿತ ಮಂಡಳಿಯಿಂದ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ಜಿಲ್ಲಾ ವರದಿಗಾರ ಕೇಶವಮೂರ್ತಿ ವಿ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಚಾರ್ಯೆ ಸುರೇಖಾ ಕಟ್ಟಿ, ರಾಣೆಬೆನ್ನೂರ ವಿಜಯವಾಣಿ ವರದಿಗಾರ ಕರಿಯಪ್ಪ ಅರಳಿಕಟ್ಟಿ, ಉಪನ್ಯಾಸಕರಾದ ಕೀರ್ತಿವರ್ಮ ಪಾನಿಗಟ್ಟಿ, ಎಸ್.ಎಂ. ಕೋರಿಶೆಟ್ಟರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.