

ತುಮಕೂರು: ವಿದ್ಯಾರ್ಥಿಯೊಬ್ಬ ಶಾಲಾ ಬಸ್ನಿಂದ ಕೆಳಕ್ಕೆ ಬಿದ್ದಿದ್ದು, ತಲೆ ಮೇಲೇ ಬಸ್ ಹಾದು ಹೋದ್ದರಿಂದ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ತುಮಕೂರು ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.
ಬಾಲಾಜಿ (10) ಸಾವಿಗೀಡಾದ ವಿದ್ಯಾರ್ಥಿ. ಈತ ಕುಣಿಗಲ್ ಪಟ್ಟಣದ ಬಿಜಿಎಸ್ ಪಬ್ಲಿಕ್ ಸ್ಕೂಲ್ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೇರೂರು ಸಮೀಪದ ಈಚಲಪಾಳ್ಯದ ಬಳಿ ಈ ಘಟನೆ ನಡೆದಿದೆ.
ಇಂದು ಶಾಲೆಯಿಂದ ಮರಳುವಾಗ ಒಂದು ಸ್ಟಾಪ್ ಮೊದಲೇ ಈತ ಬಾಗಿಲ ಬಳಿ ಬಂದು ನಿಂತಿದ್ದ. ಚಾಲಕ ವಾಹನ ರಿವರ್ಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಯತಪ್ಪಿ ಕೆಳಕ್ಕೆ ಬಿದ್ದ ಈತನ ತಲೆ ಮೇಲೇ ಬಸ್ ಹಾದು ಹೋಗಿದೆ. ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸಂಬಂಧಿಕರು ಬಿಜಿಎಸ್ ಸ್ಕೂಲ್ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.