

ಬೆಂಗಳೂರು: ಒದ್ದೆ ಕೈಯಲ್ಲಿ ಮೊಬೈಲ್ ಚಾರ್ಜ್‌ಗೆ ಹಾಕುವಾಗ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ವೆಸ್ಟ್‌ಆಫ್ ಕಾರ್ಡ್ ರಸ್ತೆಯ ಪಿ.ಜಿ.ನಿವಾಸಿ ಶ್ರೀನಿವಾಸ್(೨೩) ಮೃತ ದುರ್ದೈವಿ. ಶುಕ್ರವಾರ ರಾತ್ರಿ ಸುಮಾರು ೮ ಗಂಟೆಗೆ ಪೇಯಿಂಗ್ ಗೆಸ್ಟ್(ಪಿ.ಜಿ)ನಲ್ಲಿ ರೂಮ್‌ನಲ್ಲಿ ಈ ಘಟನೆ ನಡೆದಿದೆ.
ಬೀದರ್ ಮೂಲದ ಶ್ರೀನಿವಾಸ್ ಬಿಎಸ್ಸಿ ಪದವಿಧರನಾಗಿದ್ದಾನೆ. ಕಂಪ್ಯೂಟರ್ ಕೋರ್ಸ್ ವ್ಯಾಸಂಗ ಮಾಡಲು ಒಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಪಿ.ಜಿಯಲ್ಲಿ ನೆಲೆಸಿದ್ದ. ಶುಕ್ರವಾರ ರಾತ್ರಿ ಶೌಚಾಲಯಕ್ಕೆ ಹೋಗಿ ವಾಪಾಸ್ ಬಂದು ಒದ್ದೆ ಕೈಯಲ್ಲಿ ಮೊಬೈಲ್ ಚಾರ್ಜ್‌ಗೆ ಹಾಕಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್ ಪ್ರವಹಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಕೆಲ ಹೊತ್ತಿನ ಬಳಿಕ ಸ್ನೇಹಿತರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಶ್ರೀನಿವಾಸ್‌ನನ್ನು ಕಂಡು ಮುಟ್ಟಿ ಎಚ್ಚರಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ. ಬಳಿಕ ರೂಮ್‌ನ ವಿದ್ಯುತ್ ಸ್ಥಗಿತಗೊಳಿಸಿ, ಕೂಡಲೇ ಶ್ರೀನಿವಾಸ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಶ್ರೀನಿವಾಸ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ತಜ್ಞರ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೆಲವು ಮಾದರಿಗಳನ್ನು ಸಂಗ್ರಹಿಸಿದೆ. ಶನಿವಾರ ಶ್ರೀನಿವಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.