ಕಾಲೇಜಿನಿಂದ ಅಮಾನತ್ತಾದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

Crime Logo
Published on

ಬೆಂಗಳೂರು: ಕಾಲೇಜಿನಿಂದ ಅಮಾನತ್ತಾದ ಕಾರಣಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ನಾಗರಬಾವಿಯ ವಿನಾಯಕ ಲೇಔಟ್ ನಿವಾಸಿ ನಿಖಿಲ್(೨೨) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಗುರುವಾರ ರಾತ್ರಿ ಮನೆಯಲ್ಲೇ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥನಾಗಿದ್ದ ನಿಖಿಲ್‌ನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.


ಮೃತ ನಿಖಿಲ್ ಬನ್ನೇರುಘಟ್ಟದ ಖಾಸಗಿ ಕಾಲೇಜಿನ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸಿನ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ತಿಂಗಳ ಹಿಂದೆ ವಿದ್ಯಾರ್ಥಿನಿ ಜತೆಗೆ ಅನುಚಿತವಾಗಿ ವರ್ತಿಸಿದ ಎಂಬ ಕಾರಣಕ್ಕೆ ಕಾಲೇಜಿನ ಆಡಳಿತ ಮಂಡಳಿ ನಿಖಿಲ್‌ನನ್ನು ಅಮಾನತು ಮಾಡಿತ್ತು. ಬಳಿಕ ನಿಖಿಲ್, ತಾಯಿಯ ಜತೆಗೆ ಕಾಲೇಜಿಗೆ ತೆರಳಿ ಕ್ಷಮೆಯಾಚಿಸಿ, ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದ. ಆದರೂ ಕಾಲೇಜಿನ ಆಡಳಿತ ಮಂಡಳಿ ಕಾಲೇಜಿಗೆ ಪ್ರವೇಶ ಕಲ್ಪಿಸಿರಲಿಲ್ಲ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿಗೆ ಕಿರುಕುಳ ಆರೋಪ:
ಕಾಲೇಜಿನ ಸಿಬ್ಬಂದಿ ನಿಖಿಲ್ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಾಲೇಜಿನ ಹೊರಗೆ ಹೊಕಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಒಂದು ತಿಂಗಳಿಂದ ಕಾಲೇಜಿನ ಪ್ರಾಂಶುಪಾಲರು, ಡೀನ್ ನನ್ನ ಮಗನಿಗೆ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ನನ್ನ ಮಗ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಂದು ಮೃತನ ಪಾಲಕರು ಆರೋಪಿಸಿದ್ದಾರೆ. ನಿಖಿಲ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೋಟ್‌ಬುಕ್‌ನಲ್ಲಿ ಕಾಲೇಜಿನಲ್ಲಿ ನಡೆದ ಘಟನೆ ಬಗ್ಗೆ ಬರೆದಿರುವುದು ಕಂಡು ಬಂದಿದೆ. ಮೃತನ ಪಾಲಕರು ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net