

ಬೆಂಗಳೂರು: ಕಾಲೇಜಿನ ಹಾಸ್ಟೆಲ್‌ನ ಕಟ್ಟಡದ ೬ನೇ ಮಹಡಿಯಿಂದ ಜಿಗಿದು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಚಿಕ್ಕಬಾಣಾವಾರದ ಖಾಸಗಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಅತುಲ್ಯ(೧೯) ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ಮಧ್ಯಾಹ್ನ ೩ ಗಂಟೆಗೆ ಹಾಸ್ಟೆಲ್ ಕಟ್ಟಡದಿಂದ ಜಿಗಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರಾತ್ರಿ ೧೦ ಗಂಟೆ ವೇಳೆಗೆ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಪಾಲಕ್ಕಾಡ್ ಮೂಲದ ಅತುಲ್ಯ ಒಂದೂವರೆ ತಿಂಗಳ ಹಿಂದೆಯಷ್ಟೇ ಚಿಕ್ಕಬಾಣಾವಾರದ ಖಾಸಗಿ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ಕೋರ್ಸ್‌ಗೆ ದಾಖಲಾಗಿದ್ದಳು. ಕಾಲೇಜಿನ ಹಾಸ್ಟೆಲ್‌ನಲ್ಲೇ ಉಳಿದುಕೊಂಡಿದ್ದಳು. ಭಾನುವಾರ ಮಧ್ಯಾಹ್ನ ಸುಮಾರು ೩ ಗಂಟೆಗೆ ೬ನೇ ಮಹಡಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಿದ್ದ ರಭಸಕ್ಕೆ ಕೈ-ಕಾಲು, ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ರಾತ್ರಿ ಮೃತಪಟ್ಟಿದ್ದಾಳೆ.
ನಗರದಲ್ಲಿ ಓದಲು ಇಷ್ಟವಿರಲಿಲ್ಲ:
ಸದ್ಯ ಅತುಲ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಕೆಗೆ ಬೆಂಗಳೂರಿನ ಓದಲು ಇಷ್ಟುವಿರಲಿಲ್ಲ. ಊರಿಗೆ ವಾಪಾಸ್ ಬರುವುದಾಗಿ ಪಾಲಕರಿಗೆ ಹೇಳುತ್ತಿದ್ದಳು. ಸ್ವಲ್ಪ ದಿನ ಕಳೆದರೇ ಎಲ್ಲವೂ ಸರಿ ಹೋಗಲಿದೆ ಎಂದು ಪಾಲಕರು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಈ ನಡುವೆ ಖಿನ್ನತೆಗೆ ಒಳಗಾಗಿದ್ದ ಅತುಲ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ವಿಷಯ ತಿಳಿದು ಪಾಲಕರು ಕೇರಳದಿಂದ ನಗರಕ್ಕೆ ಬಂದಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಒಪ್ಪಿಸಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.