

ಕೋಲ್ಕತಾ: ವೈದ್ಯಕೀಯ ಕಾಲೇಜಿನಲ್ಲಿನ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟುಹಾಕಿದೆ. ಇದು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ಮತ್ತು ಮುಷ್ಕರಗಳಿಗೆ ಕಾರಣವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿರುವ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿದ್ಯಾರ್ಥಿನಿ ಕೀರ್ತಿ ಶರ್ಮಾ ವಿರುದ್ಧ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯನ್ನು ನೆನಪಿಸುವ ರೀತಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹತ್ಯೆ ಮಾಡಲು ಇತರರನ್ನು ಪ್ರೋತ್ಸಾಹಿಸಿರುವ ಆರೋಪವಿದೆ. ಆರೋಪಿಯು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮೂರು ಪೋಸ್ಟ್ಗಳನ್ನು ಅಪ್ಲೋಡ್ ಮಾಡಿದ್ದಾಳೆ.
ಸಂತ್ರಸ್ತೆ ವೈದ್ಯೆಯ ಭಾವಚಿತ್ರ ಮತ್ತು ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ತಲ್ತಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ವಿರುದ್ಧ ಎರಡು ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ. ಪ್ರಚೋದನಕಾರಿ ಕಾಮೆಂಟ್ ಮತ್ತು ಮುಖ್ಯಮಂತ್ರಿ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಇದು ಆಕೆಯ ಸ್ವಭಾವ ಸಮಾಜದಲ್ಲಿನ ಅಶಾಂತಿಗೆ ಕಾರಣವಾಗಬಹುದು ಮತ್ತು ಸಮುದಾಯದ ನಡುವೆ ದ್ವೇಷವನ್ನು ಉತ್ತೇಜಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ವಿದ್ಯಾರ್ಥಿನಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದರು. ಈ ಹಿಂದೆ ಪ್ರಕರಣದಕ್ಕೆ ಸಂಬಂಧಿಸಿದಂತೆರ ವದಂತಿ ಹರಡಿದ ಮತ್ತು ವೈದ್ಯೆಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಕೋಲ್ಕತಾ ಪೊಲೀಸರು ಮಾಜಿ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಮತ್ತು ಇಬ್ಬರು ಉನ್ನತ ವೈದ್ಯರಿಗೆ ಸಮನ್ಸ್ ನೀಡಿದ್ದರು.(ಏಜೆನ್ಸೀಸ್)