ಬಗರ್‌ಹುಕುಂ ಸಮಿತಿ ರಚಿಸದಿದ್ದರೆ ಹೋರಾಟ: ಕಾಂತರಾಜ್

jds kantharaj
ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಕಾಂತರಾಜ್
Published on

ಶಿವಮೊಗ್ಗ: ಇನ್ನೊಂದು ವಾರದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಗರ್‌ಹುಕುಂ ಸಮಿತಿ ರಚನೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು. ಜತೆಗೆ ಕಾನೂನು ಮೊರೆ ಹೋಗುವುದಾಗಿ ಗ್ರಾಮಾಂತರ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಕಾಂತರಾಜ್ ಎಚ್ಚರಿಕೆ ನೀಡಿದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬಗರ್‌ಹುಕುಂ ಸಮಿತಿ ರಚಿಸಲಾಗಿದೆ. ಆದರೆ ಶಿವಮೊಗ್ಗ ತಾಲೂಕಿನಲ್ಲಿ ಮಾತ್ರ ರಚಿಸಿಲ್ಲ. ಇದರಿಂದ ಅರಣ್ಯ ಇಲಾಖೆಯವರು ನೋಟಿಸ್ ಜತೆಗೆ ಜೆಸಿಬಿ ತಂದು ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಭೂ ಕಬಳಿಕೆ ನ್ಯಾಯಾಲಯವನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ ಇದುವರೆಗೂ ಮಾಡಿಲ್ಲ. ಪ್ರಸ್ತುತ ಬೆಂಗಳೂರಿನಲ್ಲಿರುವ ಭೂ ಕಬಳಕೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತಿರುವುರಿಂದ ರೈತರು ನ್ಯಾಯಾಲಯಕ್ಕೆ ಓಡಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಾಂತರ ಕ್ಷೇತ್ರಕ್ಕೆ ಕಳೆದ ಒಂದೂವರೆ ವರ್ಷದಿಂದ ಒಂದೇ ಒಂದು ಸರ್ಕಾರಿ ಮನೆ ಮಂಜೂರು ಮಾಡಿಲ್ಲ. ಹೀಗಾಗಿ ಶಾಸಕರು ಜನರ ಕಣ್ತಪ್ಪಿಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಗ್ರಾಮಗಳಿಗೆ ರುದ್ರಭೂಮಿ ನೀಡಲಾಗಿದೆ. ಆದರೆ ಅಳತೆ ಮಾಡಿ ದಾಖಲೆ ಮಾಡಿಕೊಟ್ಟಿಲ್ಲ. ಹೀಗಾಗಿ ಮೂಲ ಸೌಕರ್ಯ ಕಲ್ಪಿಸಲು ಆಗುತ್ತಿಲ್ಲ. ಅರಣ್ಯ ಇಲಾಖೆಯು ಆ ಭೂಮಿ ತಮಗೆ ಸೇರಿದ್ದೆಂದು ತಕರಾರು ಮಾಡುತ್ತಿದೆ. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ ಜಾರಿಗೊಳಿಸಿದ್ದ 94ಸಿ ಹಾಗೂ 94ಡಿ ಕಾನೂನು ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಅರ್ಜಿ ವಿಲೇವಾರಿ ಕೂಡ ಮಾಡುತ್ತಿಲ್ಲ ಎಂದು ದೂರಿದರು.
ಭದ್ರಾವತಿ ತಹಸೀಲ್ದಾರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜನಪರ ಕೆಲಸ ಮಾಡುವಂತೆ ಮನವಿ ಮಾಡಿದರೆ ಆರೋಗ್ಯ ಸರಿ ಇಲ್ಲ ಎಂಬ ನೆಪ ಹೇಳುತ್ತಿದ್ದಾರೆ. ಅವರನ್ನು ಬದಲಾಯಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಭದ್ರಾವತಿ ತಾಲೂಕಿನ ಪ್ರತಿ ಗ್ರಾಮಗಳ ಕೆಲವು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ನಿಯಂತ್ರಿಸುವಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.
ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಸತೀಶ್ ಕಸಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ, ಕುಮಾರನಾಯ್ಕ, ಪರಶುರಾಮ, ಇನಾಯತ್‌ವುಲ್ಲಾ, ಹೊಳಲೂರು ಯೋಗೇಶ್, ಬೋಜ್ಯಾನಾಯ್ಕ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net