

ಶಿವಮೊಗ್ಗ: ಮನುಷ್ಯನ ಮನಸ್ಸು ಪ್ರಕಾಶಕ್ಕಿಂತ ವೇಗವಾಗಿರುತ್ತದೆ. ಹಾಗಾಗಿ ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದರೆ ಅದರ ಫಲವನ್ನು ಕಾಣಬಹುದು ಎಂದು ವಾರಾಣಸಿ ಜಂಗಮವಾಡಿ ಮಠದ ಕಾಶಿ ಜ್ಞಾನಸಿಂಹಾಸನ ಮಹಾಸಂಸ್ಥಾನ ಪೀಠಾಧೀಶ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವಿಜಯನಗರದಲ್ಲಿ ಶುಕ್ರವಾರ ವೀರಶೈವ ಲಿಂಗಾಯತ ವಧು-ವರರ ಅನ್ವೇಷಣಾ ಕೇಂದ್ರ, ಶ್ರೀಗುರು ಶಾಂತವೀರೇಶ್ವರ ಟೂರ್ಸ್, ಶ್ರೀಗುರು ಶಾಂತವೀರೇಶ್ವರ ಡೆವಲಪರ್ಸ್ ಸಹಯೋಗದಲ್ಲಿ ಶ್ರೀ ಗುರು ಶಾಂತವೀರೇಶ್ವರ ಸೇವಾ ಸಮಿತಿಯ ರಜತಮಹೋತ್ಸವ ನಿಮಿತ್ತ ಇಷ್ಟಲಿಂಗ ಮಹಾಪೂಜೆ ಬಳಿಕ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಗಳನ್ನು ಮನಃಪೂರ್ವಕವಾಗಿ ಮಾಡುವುದರಿಂದ ವಿಕಾಸ ಸಾಧ್ಯವಿದೆ. ಮನಸಿದ್ದರೆ ಮಾರ್ಗ ಎಂಬಂತೆ ಮನಸ್ಸು ನಾವು ಕೈಗೊಳ್ಳುವ ಕಾರ್ಯವನ್ನು ಗುರಿಯೆಡೆಗೆ ಕೊಂಡೊಯ್ಯುತ್ತದೆ. ಶರೀರದ ಯೋಗಕ್ಕೂ ಮಾನಸಿಕ ಯೋಗಕ್ಕೂ ಸಾಕಷ್ಟು ಸಾಮತ್ಯೆ ಇದೆ. ಬಹಳಷ್ಟು ಜನರಿಗೆ ದೇಹವಿದ್ದರೂ ಒಳ್ಳೆಯ ಮನಸ್ಸಿರುವುದಿಲ್ಲ. ಮನಸ್ಸು ಮತ್ತು ದೇಹವನ್ನು ಕೂಡಿಸುವುದೇ ಯೋಗ. ಮನಸ್ಸು ಮತ್ತು ದೇಹವನ್ನು ಬೆಳೆಸಿಕೊಳ್ಳುತ್ತಾರೋ ಅವರು ಜೀವನದಲ್ಲೂ ಉನ್ನತಿಯತ್ತ ಸಾಗುತ್ತಾರೆ ಎಂದು ಹೇಳಿದರು.
ಪ್ರಾಣಾಯಾಮ, ಧ್ಯಾನ ಮಾಡುವುದಷ್ಟೇ ಯೋಗವಲ್ಲ. ಮನಸ್ಸಿಟ್ಟು ಕೆಲಸ ಮಾಡುವುದೂ ಯೋಗ ಆಗಲಿದೆ. ಊಟ, ವಿದ್ಯೆ, ಅಡುಗೆಯೂ ಒಂದು ಯೋಗ. ಕೆಲಸ ಯಾವುದೇ ಇದ್ದರೂ ಸಂಪೂರ್ಣ ಮನಸ್ಸಿಟ್ಟು ಮಾಡುವುದರಲ್ಲಿ ಯೋಗವನ್ನು ಕಾಣಬಹುದು. ಹಾಗಾಗಿ ಮನಸ್ಸೇ ನಿಜವಾದ ಯೋಗ ಎಂದು ಅಭಿಪ್ರಾಯಪಟ್ಟರು.
ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ವೀರಶೈವ ಸಮಾಜದ ಮುಖಂಡ ಎನ್.ಜೆ.ರಾಜಶೇಖರ ಮಾತನಾಡಿದರು. ಎಸ್.ಎನ್.ಮಹಾಲಿಂಗ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಮೇಶ್ವರದಲ್ಲಿ ಯಾತ್ರಿ ನಿವಾಸದ ದಾಸೋಹಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದರು. ಒಂದು ಕೊಠಡಿ ನಿರ್ಮಾಣಕ್ಕೆ ಐದು ಲಕ್ಷ ರೂ. ಆಗಲಿದೆ ಎಂದು ಶ್ರೀಗಳು ಹೇಳಿದ್ದು ಮುಂದೆ ಅದನ್ನು ನೀಡುವ ಶಕ್ತಿಯನ್ನು ಶ್ರೀಗಳು ಕರುಣಿಸಲೆಂದು ಪ್ರಾರ್ಥಿಸಿದರು. ಮುಖಂಡರಾದ ವಿಜ್ಞೇಶ್ವರ ಸೋಲಾಪುರ, ಚನ್ನಬಸಪ್ಪ, ರುದ್ರಯ್ಯ ಶಾಸ್ತ್ರಿ ಉಪಸ್ಥಿತರಿದ್ದರು.