

| ಡಾ. ಲಕ್ಷ್ಮೀ ಎನ್. ಪ್ರಸಾದ್ ಪ್ರಾಂತ ಉಪಾಧ್ಯಕ್ಷರು, ವಿದ್ಯಾಭಾರತಿ ಕರ್ನಾಟಕ
| ಪಾರ್ವತಿ ಎನ್. ಭಟ್ ಡಿಎಸ್ಇಆರ್ಟಿ, ಬೆಂಗಳೂರು
ರಾಷ್ಟ್ರೀಯ ಶಿಕ್ಷಣ ನೀತಿ-2020 ಈ ಶತಮಾನದ ಮೊದಲನೆಯ ಶಿಕ್ಷಣ ನೀತಿಯಾಗಿದೆ. ಈ ನೀತಿಯನ್ನು ದೇಶದಲ್ಲಿ ಜಾರಿಗೆ ತಂದು ಒಂದು ವರ್ಷ ಕಳೆದಿದೆ. 21ನೇ ಶತಮಾನದ ಕೌಶಲಗಳನ್ನು ಮಕ್ಕಳಲ್ಲಿ ಬೆಳೆಸುವುದರೊಂದಿಗೆ ಭಾರತದ ಸಾಂಸ್ಕೃತಿಕ ನೆಲೆಯಲ್ಲಿ ಶಿಕ್ಷಣವನ್ನು ರೂಪಿಸುವುದು ಈ ನೀತಿಯ ಧ್ಯೇಯವಾಗಿದೆ. ಈ ಶಿಕ್ಷಣ ನೀತಿಯಲ್ಲಿ ಪೂರ್ವಪ್ರಾಥಮಿಕ ಶಿಕ್ಷಣವನ್ನು ‘ಪೂರ್ವ ಬಾಲ್ಯಾವಸ್ಥೆಯ ಆರೈಕೆ ಮತ್ತು ಶಿಕ್ಷಣ’ದ (Early Childhood Care and Education-ಇಸಿಸಿಇ) ಅಡಿಯಲ್ಲಿ ತಂದು ಔಪಚಾರಿಕ ಶಿಕ್ಷಣದ ಭಾಗವಾಗಿ ಅಳವಡಿಸಲಾಗಿದೆ. ಇದರಿಂದ ಕೋಟ್ಯಂತರ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಭದ್ರವಾದ ಬುನಾದಿ ಸಿಗಲಿದೆ ಎನ್ನಬಹುದು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲು ಕಾರ್ಯಗಳು ನಡೆಯುತ್ತಿವೆ. ಅದರಲ್ಲೂ ಇಸಿಸಿಇ ವಿಭಾಗದಲ್ಲಿ ಬಿರುಸಿನ ಕಾರ್ಯ ಗಳು ನಡೆಯುತ್ತಿವೆ. ಇದರ ಆಶಯಗಳೇನು ಎಂಬುದರತ್ತ ಗಮನ ಹರಿಸೋಣ.
8 ವರ್ಷದೊಳಗಿನ ಮಕ್ಕಳಿಗೆ 0-3 ಹಾಗೂ 3-8 ವರ್ಷಗಳ ಎರಡು ಸ್ತರಗಳಲ್ಲಿ ಪಠ್ಯವಸ್ತು ಮತ್ತು ಶಿಕ್ಷಣಕ್ರಮವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಹೊಂದಿದೆ. ರಾಷ್ಟ್ರೀಯ - ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿರುವ ಅತ್ಯುತ್ತಮ ಶಿಕ್ಷಣ ಪದ್ಧತಿಗಳನ್ನೊಳಗೊಂಡಂತೆಯೇ ಇದು ರೂಪುಗೊಳ್ಳಲಿದೆ.
ಶಿಶುವಿನ ಕಮೇಂದ್ರಿಯಗಳ ಬೆಳವಣಿಗೆ (motor development): ಸುಮಾರು 6 ರಿಂದ 8 ವರ್ಷದೊಳಗೆ ಪೂರ್ಣಗೊಳ್ಳುತ್ತದೆ. ಶಿಶುವು ಜ್ಞಾನೇಂದ್ರಿಯ ಗಳಿಂದ ವಿಷಯಗಳನ್ನು ಗ್ರಹಿಸಿ ಕಮೇಂದ್ರಿಯಗಳಿಂದ ಚಟುವಟಿಕೆಗಳನ್ನು ಮಾಡುತ್ತದೆ. ಹಾಗಾಗಿ, ಈ ಶೈಶವಾವಸ್ಥೆಯಲ್ಲಿ ಜ್ಞಾನೇಂದ್ರಿಯ-ಕಮೇಂದ್ರಿಯಗಳ ನಡುವೆ ಸಮನ್ವಯ ಉಂಟುಮಾಡುವಂತಹ ಚಟುವಟಿಕೆಗಳನ್ನು ರೂಪಿಸಬೇಕು ಹಾಗೂ ಅದಕ್ಕಾಗಿ ವ್ಯವಸ್ಥೆಯನ್ನು ಕಲ್ಪಿಸಿಕೊಡ ಬೇಕು. ಈ ಅವಧಿಯಲ್ಲಿ ಬರವಣಿಗೆಗೆ ಪ್ರಾಧಾನ್ಯ ನೀಡುವಂತಿಲ್ಲ. ಈ ರೀತಿಯ ಸಮನ್ವಯ ಆಧಾರಿತ ಚಟುವಟಿಕೆಗಳು ಶಿಶುವನ್ನು ಮುಂದಿನ ಕಲಿಕೆಗೆ ಅಣಿಗೊಳಿಸುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಹೆಗ್ಗುರುತು ಈ ನೆಲದ ಸಂಸ್ಕೃತಿಗೆ ನೀಡಲಾಗಿರುವ ಮಹತ್ವ. ಭಾರತದ ನೆಲದಲ್ಲಿ ಸಹಸ್ರಾರು ವರ್ಷಗಳಿಂದ ರೂಪುಗೊಂಡಿರುವ ಸಾಂಸ್ಕೃತಿಕ ಅಂಶಗಳಿಗೂ ಇಲ್ಲಿ ಪ್ರಾಧಾನ್ಯ ನೀಡಲಾಗಿದೆ. ಸ್ಥಳೀಯ/ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸುವ ಕಲೆ, ಕಥೆ, ಹಾಡುಗಳು, ಆಟಗಳು, ಪದ್ಯಗಳು - ಇವುಗಳನ್ನು ಒಳಗೊಳ್ಳುವುದರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇದರ ಗಮ್ಯ ರಾಷ್ಟ್ರೀಯತೆಯೇ ಆಗಿದೆ ಹಾಗೂ ಭಾರತದ ನೆಲದೊಂದಿಗೆ ಬೆಸೆಯುವುದೇ ಆಗಿದೆ.
ಶಿಶು ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಎಂಬ ಸರ್ಕಾರೇತರ ಸಂಸ್ಥೆಯು ಈ ನಿಟ್ಟಿನಲ್ಲಿ ಅನವರತ ಕ್ರಿಯಾಶೀಲವಾಗಿದೆ. ಇಸಿಸಿಇಯ ಆಶಯಗಳೆಲ್ಲವನ್ನೂ ತನ್ನೊಳಗೆ ಸೇರಿಸಿಕೊಂಡು ಹಲವು ದಶಕಗಳಿಂದ ಶಿಶುಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತಾ ಬಂದಿದೆ. ಎನ್ಸಿಇಆರ್ಟಿಯ ಯೋಜನೆಯಾದ 0-3 ವರ್ಷಗಳ ಶಿಶು ಶಿಕ್ಷಣವೂ ಈ ಸಂಸ್ಥೆಯಿಂದ ಈಗಾಗಲೇ ಯಶಸ್ವಿಯಾಗಿ ನಡೆಯುತ್ತಿದೆ. ಸಾಮಾನ್ಯವಾಗಿ 0-3 ಎಂದರೆ ಜನನದಿಂದ ಮೂರು ವರ್ಷಗಳವರೆಗೆ ಎಂದು ಅರ್ಥೈಸಲಾಗುತ್ತದೆ. ಆದರೆ, ಇಲ್ಲಿ ಶಿಶು ಶಿಕ್ಷಣ ಪ್ರಾರಂಭವಾಗುವುದು ನವದಂಪತಿ ಶಿಕ್ಷಣದಿಂದ! ಹೌದು, ವಿದ್ಯಾಭಾರತಿಯ ‘ನಮೂನಾರೂಪ ಶಿಶುವಾಟಿಕಾ’ ಎಂದು ಕರೆಯಲ್ಪಡುವ ಈ ಪದ್ಧತಿಯಲ್ಲಿ 5 ಹಂತಗಳಿವೆ, ಅವೆಂದರೆ, 1) ನವದಂಪತಿ ಶಿಕ್ಷಣ, 2) ಗರ್ಭಿಣಿ ಶಿಕ್ಷಣ, 3) ಜನನದಿಂದ 1 ವರ್ಷದವರೆಗಿನ ಮಕ್ಕಳ ತಾಯಂದಿರ ಶಿಕ್ಷಣ, 4) 1 ರಿಂದ 3 ವರ್ಷದವರೆಗಿನ ಮಕ್ಕಳ ತಾಯಂದಿರ ಶಿಕ್ಷಣ, 5) 3ರಿಂದ 5 ವರ್ಷದವರೆಗಿನ ಮಕ್ಕಳ ತಾಯಂದಿರ ಶಿಕ್ಷಣ.
ಈ ಎಲ್ಲಾ ಹಂತಗಳಲ್ಲೂ, ಕುಟುಂಬದ ಇತರ ಸದಸ್ಯರಿಗೂ ನೀಡಲಾಗುವ ಪ್ರಶಿಕ್ಷಣವು ಇನ್ನೊಂದು ವೈಶಿಷ್ಟ್ಯ. ಶಿಶುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಾಲೆ ಮತ್ತು ಮನೆ -ಇವೆರಡೂ ಬಹಳ ಮಹತ್ವ ಹೊಂದಿವೆ. ಶಾಲೆಯಲ್ಲಿ ಬೌದ್ಧಿಕ ವಿಕಾಸ, ಶಾರೀರಿಕ ಆರೈಕೆ, ಪೌಷ್ಟಿಕ ಆಹಾರ - ಇವುಗಳೇನೇ ಇದ್ದರೂ, ಮನೆಯಲ್ಲಿ ಸಿಗಬೇಕಾದ ಪ್ರೇಮ, ಸುರಕ್ಷೆಯ ವಾತಾವರಣ ಸಿಗದಿದ್ದರೆ ಈ ಎಲ್ಲಾ ವ್ಯವಸ್ಥೆಗಳೂ ಬಹುಮಟ್ಟಿಗೆ ಅಪೂರ್ಣವೆನಿಸಿಬಿಡುತ್ತವೆ.
ಅಲ್ಲದೆ, ನಮ್ಮ ಭಾರತೀಯ ಶಿಕ್ಷಣ ಶಾಸ್ತ್ರವು ತಿಳಿಸುವಂತೆ ಬಾಲ್ಯವೆಂಬುದು ಸಂಸ್ಕಾರಕ್ಕೆ ಮಹತ್ವ ಪಡೆಯಬೇಕಾದ ಕಾಲಘಟ್ಟ. ಮಕ್ಕಳು ತಮ್ಮ ಸುತ್ತಲೂ ಏನನ್ನು ನೋಡುತ್ತಾರೆಯೋ, ಯಾವ ರೀತಿಯ ಸಂದರ್ಭಗಳಿಗೆ ಒಳಪಡುತ್ತಾರೆಯೋ, ಅವೆಲ್ಲವನ್ನೂ ಹೀರಿಕೊಳ್ಳುತ್ತಾ ಬೆಳೆಯುತ್ತಾರೆ. ಶಿಶುವಿನ ಸಂಸ್ಕಾರವು ವಾಸ್ತವದಲ್ಲಿ ಗರ್ಭಾವಸ್ಥೆ ಯಿಂದಲೇ ಪ್ರಾರಂಭವಾಗುತ್ತದೆ. ಪ್ರಹ್ಲಾದ, ಮೀರಾಬಾಯಿ, ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯಿಂದ ಈ ಅಂಶವು ವೇದ್ಯವಾಗುತ್ತದೆ. ಇಸಿಸಿಇಯೊಂದಿಗೇ ಗಮನಹರಿಸಬೇಕಾದ ಇನ್ನೊಂದು ವಿಷಯವೂ ಇದೆ. ಅದೇನೆಂದರೆ, ಇಂದಿನ ದಿನಗಳಲ್ಲಿ ಟಿವಿಯಲ್ಲಿ ಬಿತ್ತರಗೊಳ್ಳುವ ಅನಪೇಕ್ಷಿತ ದೃಶ್ಯಗಳು, ಪ್ರಚೋದನಾತ್ಮಕ ಜಾಹೀರಾತುಗಳು, ಅಪರಾಧದ ವೈಭವೀಕರಣದ ಕಾರ್ಯ ಕ್ರಮಗಳು, ಹಾಗೆಯೇ ಮೊಬೈಲ್ ಫೋನ್ ಅತಿ ಬಳಕೆ- ಇವುಗಳಿಂದ ಮಕ್ಕಳನ್ನು ಕಾಪಾಡಿಕೊಳ್ಳುವ ಬಗ್ಗೆ ಕುಟುಂಬ ಸದಸ್ಯರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ವಿದ್ಯಾಭಾರತಿಯ ಪರಿವಾರ ಪ್ರಬೋಧನವು ಸಹಕಾರಿಯಾಗಿದೆ.
ಹೀಗೆ, ECCEಯಲ್ಲಿರುವ Care ಎಂಬ ಶಬ್ದಕ್ಕೆ ಕೇವಲ ಆರೈಕೆ ಅಥವಾ ಪೌಷ್ಟಿಕಾಂಶಯುಕ್ತ ಆಹಾರ, ಎಂಬ ಸೀಮಿತ ಅರ್ಥ ಕಲ್ಪಿಸದೆ ಮಾನಸಿಕ ನೆಮ್ಮದಿ, ಸಂಸ್ಕಾರ ಇವುಗಳೆಲ್ಲವನ್ನು ಪರಿಗಣಿಸಬೇಕು. ಮಕ್ಕಳ ಸರ್ವಾಂಗೀಣ ವಿಕಾಸವೆಂದರೆ ಶಾರೀರಿಕ-ಪ್ರಾಣಿಕ-ಮಾನಸಿಕ-ಬೌದ್ಧಿಕ ಹಾಗೂ ಆಧ್ಯಾತ್ಮಿಕ -ಈ ಐದೂ ಸ್ತರಗಳಲ್ಲಾಗುವ ವಿಕಾಸವಾಗಿದೆ. ಹಾಗೆಯೇ ವ್ಯಷ್ಟಿ-ಸಮಷ್ಟಿ-ಸೃಷ್ಟಿ ಹಾಗೂ ಪರಮೇಷ್ಟಿಯೆಡೆಗಿನ ವಿಕಾಸವೂ ಇಂದಿನ ಬಹುಮುಖ್ಯ ಅವಶ್ಯಕತೆ. ಇವು ಸರ್ವಾಂಗೀಣ ವಿಕಾಸದ ಭಾರತೀಯ ಪರಿಕಲ್ಪನೆಯಾಗಿವೆ.