ರಾಜ್ಯದಲ್ಲಿ ಮೈನಡುಗಿಸುವ ಚಳಿ! 18 ಜಿಲ್ಲೆಗಳಲ್ಲಿ ಉಷ್ಣಾಂಶ ತೀವ್ರ ಕುಸಿತ

ವಿಜಯವಾಣಿ (9)
Published on

ಬೆಂಗಳೂರು: ಬೆಂಗಳೂರು ನಗರ ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ಉಷ್ಣಾಂಶ ಕುಸಿತದಿಂದ ಚಳಿ ತೀವ್ರಗೊಂಡಿದೆೆ. ಬೀದರ್, ಕಲಬುರಗಿ, ವಿಜಯಪುರದಲ್ಲಿ ಮುಂದಿನ 2 ದಿನ ಭಾರಿ ಶೀತ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಕೋಲ್ಡ್ ವೇವ್ ಎಚ್ಚರಿಕೆ ಕೊಟ್ಟಿದೆ.

ಮಳೆ ಕ್ಷೀಣವಾಗಿದ್ದ ಬೆನ್ನಲ್ಲೇ ವಾಡಿಕೆಗಿಂತ ಅಧಿಕವಾಗಿ ಕಾಣಿಸಿಕೊಂಡಿರುವ ಚಳಿ ತಿಂಗಳಿಡೀ ಮುಂದುವರಿಯಲಿದೆ. ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸುತ್ತಿರುವುದು, ಲಾ ನಿನಾ ಪರಿಣಾಮ ಮುಂಗಾರು, ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು, ಮಣ್ಣು ಮತ್ತು ವಾತಾವರಣದಲ್ಲಿ ಹೆಚ್ಚು ತೇವಾಂಶ ಇರುವುದೂ ಸೇರಿ ಇತರ ಕಾರಣಗಳಿಂದ ವಾಡಿಕೆಗಿಂತ ಅಧಿಕ ಚಳಿ ಇದೆ. ಹಗಲು ಮತ್ತು ರಾತ್ರಿ ವೇಳೆ ತಣ್ಣನೆ ಗಾಳಿ ಬೀಸುತ್ತಿದ್ದು, ಜನರಿಗೆ ಮೈ ನಡುಗುವ ಅನುಭವವಾಗುತ್ತಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಪ್ರಬಲವಾಗಿ ಶೀತ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾನೆ 4ರಿಂದ 7ಗಂಟೆ ಅವಧಿಯಲ್ಲಿ ಚಳಿ ತೀವ್ರತೆ ಹೆಚ್ಚಿರಲಿದೆ.

ಕನಿಷ್ಠ ತಾಪಮಾನ ಕುಸಿತ: ಕನಿಷ್ಠ ತಾಪಮಾನದಲ್ಲಿ ವಿಜಯಪುರ 9, ಹಾಸನ, 10.3, ಬೆಳಗಾವಿ 10.4, ಚಿಂತಾಮಣಿ 10.4, ಧಾರವಾಡ 10.6, ಹಾವೇರಿ 11, ದಾವಣಗೆರೆ 11, ಚಾಮರಾಜನಗರ 11.1, ಚಿಕ್ಕಮಗಳೂರು 11.2, ಬೀದರ್ 11.5, ಬಾಗಲಕೋಟೆ 11.8, ಮಂಡ್ಯ 11.9, ರಾಯಚೂರು 12, ಬೆಂಗಳೂರು 12.6, ಶಿವಮೊಗ್ಗ 12.8, ಕಲಬುರಗಿ 13.6 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಸರಾಸರಿ 3ರಿಂದ 6 ಡಿ.ಸೆ. ಉಷ್ಣಾಂಶ ಕುಸಿತವಾಗಿದೆ. ಕೆಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿಯೂ 1-2 ಡಿ.ಸೆ. ಇಳಿಮುಖ ವಾಗಿದೆ. ಈ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಚಳಿ ಅಧಿಕವಾಗಿದ್ದು, ಸಂಜೆ, ಮುಂಜಾನೆ ಇಬ್ಬನಿ ಬೀಳುತ್ತಿದೆ.

ತೀವ್ರ ಚಳಿ

ರಾಜಧಾನಿಯಲ್ಲಿ 14 ವರ್ಷ ಬಳಿಕ ತೀವ್ರ ಚಳಿ ಕಾಣಿಸಿಕೊಂಡಿದೆ. ಶನಿವಾರ ಕನಿಷ್ಠ ತಾಪಮಾನ ಬೆಂಗಳೂರಿನಲ್ಲಿ 12.6 ಡಿ.ಸೆ.ಉಷ್ಣಾಂಶ ದಾಖಲಾಗಿದೆ. 2011ರ ಡಿ.24ರ ರಾತ್ರಿ 12.8 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಜನವರಿಯಲ್ಲಿ ಕನಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ 16 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಆದರೆ, ಈ ಬಾರಿ ಸೈಕ್ಲೋನ್ ಬಂದು ಹೋಗಿರುವುದು ಸೇರಿ ವಿವಿಧ ಕಾರಣಗಳಿಂದ ನಗರದಲ್ಲಿ ವಾಡಿಕೆಗಿಂತ 2-3 ಡಿ.ಸೆ.ಉಷ್ಣಾಂಶ ಕುಸಿದಿದೆ.

ಹೆಚ್ಚಿದ ವಿದ್ಯುತ್ ಬೇಡಿಕೆ!

| ರಾಚಯ್ಯ ಸ್ವಾಮಿ ಮಾಚನೂರು, ರಾಯಚೂರು

ರಾಜ್ಯದಲ್ಲಿ ಎಲ್ಲೆಡೆ ತಾಪಮಾನ ಕುಸಿತ ಕಂಡಿದ್ದರೂ ವಿದ್ಯುತ್ ಬಳಕೆ ಮಾತ್ರ ಕುಗ್ಗಿಲ್ಲ. ಕೃಷಿ-ವಾಣಿಜ್ಯ ಬಳಕೆ ಹೆಚ್ಚಳದಿಂದ ಚಳಿಗಾಲದಲ್ಲೂ ವಿದ್ಯುತ್ ಬೇಡಿಕೆ ಹೆಚ್ಚಳ ಕಂಡಿದ್ದು, ಕೆಪಿಸಿ (ಕರ್ನಾಟಕ ಪವರ್ ಕಾಪೋರೇಷನ್) ಒತ್ತಡಕ್ಕೆ ಸಿಲುಕಿದೆ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಸಾಮಾನ್ಯವಾಗಿ ಬೇಸಿಗೆ ಆರಂಭದಿಂದ ಏರಿಕೆ ಕಾಣುವುದು ಸಹಜ. ಆದರೆ, ಈ ಸಲ ಅದಕ್ಕೂ ಮುನ್ನವೇ ಹೆಚ್ಚಳ ಕಂಡುಬರುತ್ತಿದೆ.

ಬೇಸಿಗೆ ದಿನಗಳಲ್ಲಿ ಸಾಮಾನ್ಯವಾಗಿ ವಿದ್ಯುತ್ ಬೇಡಿಕೆ 13,000 ಮೆವಾ ಮೀರಿರುತ್ತದೆ. ಚಳಿಗಾಲದಲ್ಲಿ ಎಂಟರಿಂದ ಒಂಬತ್ತು ಸಾವಿರ ಬೇಡಿಕೆ ಇರುವುದು ಸಾಮಾನ್ಯ. ಆದರೆ, ಈಗಲೇ ಬೇಡಿಕೆ 15700 ಮೆವಾವರೆಗೆ ಬಂದು ತಲುಪಿದೆ. ಹೀಗಾಗಿ ಉತ್ಪಾದನೆ ಪ್ರಮಾಣ ಹೆಚ್ಚಿಸುವ ಒತ್ತಡಕ್ಕೆ ಕೆಪಿಸಿಗೆ ಸಿಲುಕಿಸಿದೆ. ರಾಜ್ಯದ ಥರ್ಮಲ್, ಜಲವಿದ್ಯುತ್, ಪವನ ಹಾಗೂ ಸೌರ ವಿದ್ಯುತ್ ಮೂಲಗಳಿಂದ ಸದ್ಯ 14,500 ಮೆವಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಥರ್ಮಲ್​ನಿಂದ 2100 ಮೆವಾ, ಜಲವಿದ್ಯುತ್ ಘಟಕಗಳಿಂದ 1200 ಮೆವಾ ದೊರೆಯುತ್ತಿದೆ. ಸೌರ ವಿದ್ಯುತ್​ನಿಂದ 6500 ಮೆವಾ, ಪವನ ವಿದ್ಯುತ್​ನಿಂದ 1700 ಮೆವಾ ಲಭ್ಯವಾಗುತ್ತಿದೆ.

ತಾಂತ್ರಿಕ ಅಡೆ-ತಡೆ ನೆಪದಲ್ಲಿ ಪವರ್ ಕಟ್

ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ತಾಂತ್ರಿಕ ನೆಪವೊಡ್ಡಿ ವಿದ್ಯುತ್ ಕಡಿತಗೊಳಿಸುವ ಕಾರ್ಯಕ್ಕೆ ಎಸ್ಕಾಂಗಳು ಮುಂದಾಗಿವೆ. ಕೆಲ ತಾಲೂಕು ಕೇಂದ್ರಗಳಲ್ಲೂ ಆಗಾಗ್ಗೆ ವಿದ್ಯುತ್ ಕಡಿತಗೊಳಿಸುವುದು ನಡೆದಿದೆ. ರಾಜ್ಯದಲ್ಲಿ ಹಿಂಗಾರು ಮಳೆ ಅಬ್ಬರ ಕಾಣುತ್ತಿಲ್ಲ. ಹೀಗಾಗಿ ರೈತರು ಬೆಳೆ ಸಂರಕ್ಷಣೆಗೆ ಪಂಪ್​ಸೆಟ್ ಮೊರೆ ಹೋಗಿದ್ದು, ವಾಣಿಜ್ಯ ಬಳಕೆ ಪ್ರಮಾಣವೂ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net