

ಬೆಂಗಳೂರು: ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಮಾದಕ ವಸ್ತುಗಳ ಸಾಗಣೆ ಹಾಗೂ ಮಾರಾಟದ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಂತರವಾಗಿ ಮಾದಕ ವಸ್ತುಗಳನ್ನು ನಿರ್ಮೂಲನೆ ಮಾಡಲು ನಾವು ಕಟಿಬದ್ಧರಾಗಿದ್ದೇವೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸಿರುವ ನಗರದ ಪೊಲೀಸರು ಈಗಾಗಲೇ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಪ್ರಶಂಸನೀಯ. ಸಿಬ್ಬಂದಿ ಸಣ್ಣಪುಟ್ಟ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿದ್ದಾರೆ. ವಾಹನ ಕಳವು, ಕನ್ನಕಳವು ಪ್ರಕರಣಗಳ ನಿಯಂತ್ರಣ ಮತ್ತು ಪತ್ತೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಯಾವ ಪ್ರಕರಣವನ್ನೂ ನಿರ್ಲಕ್ಷಿಸುವುದಿಲ್ಲ. ಈಗಾಗಲೇ ಹೇಳಿರುವಂತೆ ಸಾರ್ವಜನಿಕರು ವಾಹನಗಳನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಬೇಕು. ಕೀಯನ್ನು ವಾಹನದಲ್ಲೇ ಬಿಟ್ಟು ಹೋಗಬಾರದು. ನಿಮ್ಮ ವಾಹನ, ನಿಮ್ಮ ಸುರಕ್ಷತೆ ಎಂದು ಹೇಳಿದರು.
ದುಷ್ಕರ್ಮಿಗಳು ವಾಹನಗಳನ್ನು ಕದ್ದು ಅವುಗಳನ್ನೇ ಸರಗಳವು, ದರೋಡೆ, ಕನ್ನಕಳವು ಕೃತ್ಯಕ್ಕೆ ಬಳಸುತ್ತಾರೆ. ಇಂತಹ ಸಂದರ್ಭದಲ್ಲಿ ವಾಹನಗಳ ಅಸಲಿ ಮಾಲೀಕರು ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ. ಆದ ಕಾರಣ ಸಾರ್ವಜನಿಕರು ತಮ್ಮ ವಾಹನಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.