

ಶಿವಮೊಗ್ಗ: ಲೋಕಸಭಾ ಚುನಾವಣೆಯ ಮತದಾನವು ಜಿಲ್ಲೆಯಲ್ಲಿ ಸುಗಮ ಮತ್ತು ಶಾಂತಿಯುತವಾಗಿ ನಡೆಯಲು ಎಲ್ಲ ಅಗತ್ಯ ಕ್ರಮಗಳನ್ನು ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವೀಕ್ಷಕಿ ಪೂನಂ ಹೇಳಿದರು.
ಜಿಲ್ಲಾ ಚುನಾವಣಾಧಿಕಾರಿ ಅಧ್ಯಕ್ಷತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಹಾಯಕ ಚುನಾವಣಾಧಿಕಾರಿ ಹಾಗೂ ನಿಯೋಜಿತ ಸಿಬ್ಬಂದಿ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ಮತಕ್ಷೇತ್ರಗಳಿಗೆ ಭೇಟಿ ನೀಡಿ ಸೂಕ್ಷ್ಮತೆ ಅರಿಯಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ತಿಳಿಸಿದರು.
ಪ್ರತಿ ಮನೆಗಳಿಗೆ ತೆರಳಿ ಮತದಾರರ ಮಾಹಿತಿ ಸ್ಲಿಪ್‌ಗಳನ್ನು ವಿತರಿಸಬೇಕು. ಮಾಹಿತಿ ಸ್ಲಿಪ್ ವಿತರಣೆ ವೇಳೆ ಮತದಾರರ ಬೂತ್ ಮತ್ತು ಇತರ ಸಮಸ್ಯೆಗಳು ಕಂಡುಬಂದಲ್ಲಿ ಶೀಘ್ರ ಇತ್ಯರ್ಥಪಡಿಸಬೇಕು. ಇವಿಎಂ, ಅಣಕು ಮತದಾನ, ಇವಿಎಂ ಡೇಟಾ, ಬ್ಯಾಟರಿ, ಯೂಸರ್ ಬಟನ್ ಬಳಕೆ ಸೇರಿದಂತೆ ಎಲ್ಲ ಮಾಹಿತಿ ಎಸ್‌ಒಪಿಯಲ್ಲಿದೆ. ಸಂಬಂಧಿಸಿದ ಅಧಿಕಾರಿಗಳು ಎಸ್‌ಒಪಿಯನ್ನು ಸಮರ್ಪಕವಾಗಿ ಓದಿಕೊಳ್ಳಬೇಕು ಎಂದರು.
ಮತಗಟ್ಟೆಗಳು, ಮತದಾರರ ಪಟ್ಟಿ, ಕ್ರಿಟಿಕಲ್, ಪಿಡಬ್ಲ್ಯುಡಿ, ಸಖಿ, ಯುವ ಮತದಾರರ ಮತಗಟ್ಟೆಗಳ ಮಾಹಿತಿ, ಚೆಕ್‌ಪೋಸ್ಟ್, ವಶಕ್ಕೆ ಪಡೆಯಲಾದ ಅಕ್ರಮ ಹಣ, ಮದ್ಯದ ವಿವರ, ದಾಖಲಿಸಲಾದ ಪ್ರಕರಣಗಳು, ಅಧಿಕಾರಿ, ಸಿಬ್ಬಂದಿಗೆ ನೀಡಲಾದ ತರಬೇತಿ ಕುರಿತು ಮಾಹಿತಿ ಪಡೆದು ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ವೆಚ್ಚ ವೀಕ್ಷಕರಾದ ಮೀನಾಕ್ಷಿ ಸಿಂಗ್ ಮಾತನಾಡಿ, ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಜಾಗರೂಕತೆಯಿಂದ ಪರಿಶೀಲಿಸಬೇಕು. ಚೆಕ್‌ಪೋಸ್ಟ್‌ಗೆ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ ಅವಶ್ಯಕತೆ ಇದ್ದಲ್ಲಿ ತಿಳಿಸಬೇಕು ಎಂದರು.
ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಎಫ್‌ಎಸ್‌ಟಿ, ಎಸ್‌ಎಸ್‌ಟಿ ಇತರ ತಂಡಗಳು ಮತ್ತು ಸಮಿತಿಗಳ ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಸುಗಮ ಮತ್ತು ಶಾಂತಿಯುತ ಚುನಾವಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಅಬಕಾರಿ, ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ವಿವಿಧ ಸಮಿತಿ, ತಂಡಗಳ ನೋಡಲ್ ಅಧಿಕಾರಿಗಳಿಂದ ಕಾರ್ಯಕ್ಷೇತ್ರದ ಕುರಿತು ಮಾಹಿತಿ ಪಡೆಯಲಾಯಿತು. ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸ್ನೇಹಲ್ ಲೋಖಂಡೆ, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಉಪವಿಭಾಗಾಧಿಕಾರಿಗಳಾದ ಸತ್ಯನಾರಾಯಣ, ಆರ್.ಯತೀಶ್ ಇದ್ದರು.