ಕಾಯ್ದೆಗಳ ಕಟ್ಟುನಿಟ್ಟಿನ ಜಾರಿ ಅಗತ್ಯ: ಎಂ.ಎಸ್.ಸಂತೋಷ್ ಹೇಳಿಕೆ

pocso
ಶಿವಮೊಗ್ಗದಲ್ಲಿ ವಸತಿ ಶಾಲೆ ಹಾಗೂ ಕಾಲೇಜುಗಳ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ನ್ಯಾಯಾಧೀಶ ಎಂ.ಎಸ್.ಸಂತೋಷ್ ಉದ್ಘಾಟಿಸಿದರು. ಚಂದ್ರಪ್ಪ ಎಸ್. ಗುಂಡಪಲ್ಲಿ, ಎಸ್.ಆರ್.ಮಂಜುನಾಥ್, ಶೋಭಾ, ಡಿ.ಮಲ್ಲೇಶಪ್ಪ, ಶ್ರೀನಿವಾಸ, ಡಿ.ಶಂಕರಪ್ಪ ಇತರರಿದ್ದರು.
Published on

ಶಿವಮೊಗ್ಗ: ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ ನಮ್ಮೆಲ್ಲರ ಜವಾಬ್ದಾರಿ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪೋಕ್ಸೋ ತರಹದ ಅನೇಕ ಕಠಿಣ ಕಾಯ್ದೆಗಳು ಜಾರಿಯಲ್ಲಿವೆ. ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು.

ಜಿಲ್ಲೆಯ ವಸತಿ ಶಾಲೆ ಹಾಗೂ ಕಾಲೇಜುಗಳ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ವಿರುದ್ಧದ ಕೆಟ್ಟ ಘಟನೆಗಳು, ಪ್ರಕರಣಗಳನ್ನು ಶಮನ ಮಾಡಲು ಕಠಿಣವಾದ ಪೋಕ್ಸೊ ಕಾಯ್ದೆ 13 ವರ್ಷಗಳ ಹಿಂದೆಯೇ ಜಾರಿಗೆ ಬಂದಿದೆ ಎಂದರು.

ಮೂಲಭೂತವಾಗಿ ಮಕ್ಕಳ ಹಕ್ಕು ರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆಯೂ ಸಮಗ್ರ ಚರ್ಚೆ ನಡೆಯಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ ಪರಿಣಾಮಕಾರಿಯಾಗಬೇಕು ಎಂದು ತಿಳಿಸಿದರು.

ಡಿಡಿಪಿಯು ಚಂದ್ರಪ್ಪ ಎಸ್. ಗುಂಡಪಲ್ಲಿ ಮಾತನಾಡಿ, ಈಗಿನ ಕಾಲದಲ್ಲಿಯೂ ಮೂಢನಂಬಿಕೆ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯ ವಿವಾಹದಂತ ಅನಿಷ್ಟ ಪದ್ಧತಿಗಳು ಜೀವಂತವಾಗಿವೆ. ಹೆಣ್ಣು ಮಕ್ಕಳು ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ ಅವರ ವಿರುದ್ಧ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಡಿಡಿಪಿಐ ಎಸ್.ಆರ್.ಮಂಜುನಾಥ್, ಪರಿವರ್ತನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಡಿ.ಶಂಕರಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶೋಭಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀನಿವಾಸ, ಭದ್ರಾವತಿ ಬಿಇಒ ನಾಗೇಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net