

ಬೆಂಗಳೂರು: ಅಪಾಯಕಾರಿ ವ್ಹೀಲಿಂಗ್ ಮಾಡುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಬೆದರಿಕೆ ಹಾಕುವ ತಪ್ಪಿತಸ್ಥ ಸವಾರರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದರು.
ಸಂಚಾರ ಸಂಪರ್ಕ ದಿನದ ಪ್ರಯುಕ್ತ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಸಾರ್ವಜನಿಕರೊಬ್ಬರು, ‘‘ಸಾಮಾಜಿಕ ಕಳಕಳಿಯಿಂದ ನಾವು ವ್ಹೀಲಿಂಗ್ ಮಾಡುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಆದರೆ, ವ್ಹೀಲಿಂಗ್ ಮಾಡಿದವರು ಪೊಲೀಸರಿಗೆ ಮಾಹಿತಿ ಕೊಡುತ್ತೀರಾ ಎಂದು ನಮ್ಮನ್ನೇ ಬೆದರಿಸುತ್ತಾರೆ ಎಂದು ಆಯುಕ್ತರ ಬಳಿ ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘‘ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ವ್ಹೀಲಿಂಗ್ ಪ್ರಕರಣ ಕಂಡು ಬಂದರೆ ತುರ್ತು ಸ್ಪಂದನಾ ಸಹಾಯವಾಣಿ ಸಂಖ್ಯೆ ೧೧೨ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಇಲ್ಲವೇ, ಇ-ಮೇಲ್ ಮೂಲಕ ಅಥವಾ ೯೪೮೦೮೦೧೦೦೦ ವಾಟ್ಸ್‌ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಬಹುದು. ವ್ಹೀಲಿಂಗ್ ಮಾಡಿ ಸಾರ್ವಜನಿಕರನ್ನೇ ಬೆದರಿಸುವ ಸವಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದರು.
೧೬ರಿಂದ ೧೮ ವರ್ಷದೊಳಗಿನ ಯುವಕರೇ ಹೆಚ್ಚಾಗಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾರೆ. ಇವರ ಬಳಿ ಚಾಲನಾ ಪರವಾನಗಿ (ಡಿ.ಎಲ್.) ಸಹ ಇರುವುದಿಲ್ಲ. ವ್ಹೀಲಿಂಗ್ ಮಾಡಲು ದ್ವಿಚಕ್ರ ವಾಹನ ಕೊಟ್ಟ ವಾರಸುದಾರರ ವಿರುದ್ಧವೂ ಪ್ರಕರಣ ದಾಖಲಿಸಿ ದಂಡ ವಿಧಿಸುತ್ತಿದ್ದೇವೆ. ವ್ಹೀಲಿಂಗ್ ಸಂಬಂಧ ಸಾರ್ವಜನಿಕರು ನಿರ್ಭೀತಿಯಿಂದ ಮಾಹಿತಿ ಕೊಡಬಹುದು ಎಂದು ಅಭಯ ನೀಡಿದರು.
ಟ್ರಾಫಿಕ್ ಸಮಸ್ಯೆಗೆ ಅಸಮಾಧಾನ:
ನಗರದಲ್ಲಿ ಇತ್ತೀಚೆಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಸಾಕಷ್ಟು ಸಾರ್ವಜನಿಕರು ಸಂವಾದದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಆಯುಕ್ತರು, ‘‘ನಗರದಲ್ಲಿ ೧೩ ಮೇಲ್ಸೇತುವೆಗಳಿದ್ದು, ಇವುಗಳನ್ನು ತುಂಬಾ ವರ್ಷಗಳ ಹಿಂದಿನ ವಾಹನಗಳ ಸಂಖ್ಯೆಗೆ ಅನುಗುಣವಾಗಿ ನಿರ್ಮಿಸಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಸಂಚಾರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವ್ಹೀಲಿಂಗ್ ಮಾಡಿದ ಆರೋಪಿಯ ಬಂಧನ:
ಕಾಡುಗೋಡಿ ಮೇಲ್ಸೇತುವೆಯಲ್ಲಿ ಶುಕ್ರವಾರ ರಾತ್ರಿ ವ್ಹೀಲಿಂಗ್ ಮಾಡುತ್ತಿದ್ದ ಉಮೇರ್ ಅಹಮ್ಮದ್ ಎಂಬಾತನ ವಿರುದ್ಧ ವೈಟ್‌ಫೀಲ್ಡ್ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ. ಮೂಲತಃ ಮೈಸೂರಿನ ಉಮೇರ್, ನಗರದ ಸರ್ಜಾಪುರದಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದ. ಆತ ಮೋಜಿಗಾಗಿ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ವ್ಹೀಲಿಂಗ್ ಮಾಡಿದ ಸಂಬಂಧ ಉಮೇರ್ ವಿರುದ್ಧ ಮೈಸೂರಿನಲ್ಲೂ ಈ ಹಿಂದೆಯೇ ಪ್ರಕರಣ ದಾಖಲಾಗಿದ್ದವು. ಇದೀಗ ಆತನ ವಿರುದ್ಧ ಅಜಾಗರೂಕ ಮತ್ತು ಅತಿ ವೇಗದ ಚಾಲನೆ, ಸಾರ್ವಜನಿಕರಿಗೆ ಸಮಸ್ಯೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ, ಆತನ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.