

ಮಾದಕವಸ್ತುಗಳ ಭಯಾನಕ ಜಾಲ ಅದೆಷ್ಟೋ ಜೀವಗಳನ್ನು ನಲುಗಿಸುತ್ತಿದೆ. ಅದರಲ್ಲೂ, ಹದಿಹರೆಯದ ಹುಡುಗ-ಹುಡುಗಿಯರು ಮತ್ತು ಯುವಕರನ್ನು ಗುರಿಯಾಗಿಸಿಕೊಂಡು, ಅವರನ್ನು ಮಾದಕವಸ್ತುಗಳ ವ್ಯಸನಿಗಳಾಗಿಸುತ್ತಿರುವುದು ಹೊಸ ವಿಷಯವೇನಲ್ಲ. ಈ ಪಿಡುಗು ಯಾವ ಬಗೆಯ ಸಾಮಾಜಿಕ ತಲ್ಲಣವನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಪಂಜಾಬ್ ರಾಜ್ಯ ಸಾಕ್ಷಿಯಾಗಿದೆ. ನೂರಾರು ಯುವಕರು ಈ ಚಟಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದರೆ, ಸಾವಿರಾರು ಜನರು ಖಿನ್ನತೆಯ ಕೂಪಕ್ಕೆ ಜಾರಿದ್ದಾರೆ.
ಹಲವು ಹಳ್ಳಿಗಳು ಪುರುಷರಿಲ್ಲದೆ ಬಿಕೋ ಎನ್ನುತ್ತಿವೆ. ಅಲ್ಲಿ ಮಾದಕವಸ್ತು ವ್ಯಸನ ವಿರುದ್ಧದ ಹೋರಾಟ ತೀವ್ರ ಕಠಿಣವಾಗಿ ಪರಿಣಮಿಸಿದ್ದು, ಅದು ಚುನಾವಣಾ ವಿಷಯವಾಗಿಯೂ ಮಾರ್ಪಟ್ಟಿತ್ತು ಮತ್ತು ಇಂಥ ಜಾಲಗಳನ್ನು ಭೇದಿಸುವಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಹಿಂದಿನ ಅಕಾಲಿದಳ-ಬಿಜೆಪಿ ಸರ್ಕಾರ ಅಧಿಕಾರವನ್ನೇ ಕಳೆದುಕೊಂಡಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪಂಜಾಬ್ಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಮಾದಕವಸ್ತುಗಳು ಬರುತ್ತಿದ್ದರೆ, ದೇಶದ ಉಳಿದ ಭಾಗಗಳಲ್ಲಿ ನೈಜೀರಿಯಾದಿಂದ ಡ್ರಗ್ಸ್ ಮಾಫಿಯಾ ಹರಡುತ್ತಿದೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ. ಹೈಸ್ಕೂಲ್-ಕಾಲೇಜ್, ವಿಶ್ವವಿದ್ಯಾಲಯ ಮತ್ತು ಇತರೆ ಶೈಕ್ಷಣಿಕ ಸಂಸ್ಥೆಗಳ ಕ್ಯಾಂಪಸ್ಗಳ ಸುತ್ತಮುತ್ತ ಮಾದಕವಸ್ತುಗಳು ದೊರೆಯುವಂತಾಗಲು, ಇದರ ಹಿಂದಿರುವ ಭಾರಿ ಜಾಲಗಳೇ ಕಾರಣ. ಕರ್ನಾಟಕದಲ್ಲೂ ಈ ಪಿಡುಗು ವ್ಯಾಪಕವಾಗಿಯೇ ಇದೆ. ಅಲ್ಲದೆ, ತಪ್ಪಿತಸ್ಥರು ಸುಲಭವಾಗಿ ಕಾನೂನಿನ ಕುಣಿಕೆಯಿಂದ ಪಾರಾಗುವ ಅಪಸವ್ಯಕ್ಕೂ ಹಲವು ನಿದರ್ಶನಗಳುಂಟು.
ಹಾಗಾಗಿಯೇ, ಡ್ರಗ್ಸ್ ಮಾಫಿಯಾ ತಡೆಗೆ ಹೊಸ ಕಾಯ್ದೆಯ ಅಸ್ತ್ರ ದೊರಕಿರುವುದು ಸ್ವಾಗತಾರ್ಹವಾಗಿದೆ. ಇಂಥದ್ದೊಂದು ಕ್ರಮ ಅವಶ್ಯವೂ, ಅನಿವಾರ್ಯವೂ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಗೂಂಡಾ ಕಾಯ್ದೆ ಮಾದರಿಯಲ್ಲೇ ಡ್ರಗ್ಸ್ ದಂಧೆಕೋರರ ವಿರುದ್ಧ ‘ಮಾದಕ ವಸ್ತು ಸಾಗಣೆ ಮತ್ತು ಮಾರಾಟ ನಿರ್ಬಂಧ’ ( ಪಿಐಟಿ-ಎನ್ಡಿಪಿಎಸ್ ಆಕ್ಟ್ 1998) ಕಾಯ್ದೆ ಪ್ರಯೋಗಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಪೊಲೀಸರಿಗೆ ಒದಗಿಸಿದೆ. ಈ ಅಧಿಕಾರ ಪ್ರಾಪ್ತಿಯಾದ ಬೆನ್ನಲ್ಲೇ ಪೊಲೀಸರು ನೈಜೀರಿಯಾ ಮೂಲದ ಒಬ್ಬ ಡ್ರಗ್ ದಂಧೆಕೋರರನ್ನು ಬಂಧಿಸಿದ್ದಾರೆ. ಈ ಕಾಯ್ದೆಯಡಿ ಬಂಧಿತನಿಗೆ ಕನಿಷ್ಠ 1 ವರ್ಷ ಜೈಲು ವಾಸವಿದ್ದು, ವಿಶೇಷ ಪ್ರಕರಣಗಳಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಒಂದು ವರ್ಷ ಜಾಮೀನು ಸಿಗದ ಕಾರಣ ದಂಧೆಕೋರರಿಗೆ ಕಡಿವಾಣ ಬೀಳಲಿದೆ ಎಂಬುದು ಪೊಲೀಸ್ ಇಲಾಖೆಯ ಆಶಯವಾಗಿದೆ.
ಈ ಮುಂಚೆ ಮಾದಕವಸ್ತು ಕಾಯ್ದೆಯಡಿ ಬಂಧಿತರಾದವರು ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬರುತ್ತಿದ್ದರಲ್ಲದೆ, ಮತ್ತೆ ಹಳೇ ಚಾಳಿಯನ್ನು ಮುಂದುವರಿಸುತ್ತಿದ್ದರು. ಹಾಗಾಗಿ, ಈ ದಂಧೆಕೋರರನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಪ್ರಸಕ್ತ, ಇಂಥ ದಂಧೆಕೋರರ ಬಂಧನಕ್ಕೆ ಕಮಿಷನರ್ಗಳು, ವಲಯ ಐಜಿಪಿಗಳು ಆದೇಶ ಹೊರಡಿಸಬಹುದಾಗಿದೆ. ಅಲ್ಲದೆ, ವಾರಂಟ್ ಮೇಲೆ ದೇಶದ ಯಾವ ಮೂಲೆಯಲ್ಲಿದ್ದರೂ ಆರೋಪಿಯನ್ನು ಬಂಧಿಸಬಹುದಾಗಿದೆ. ಹಾಗಾಗಿ, ಹೊಸ ಕಾಯ್ದೆಯಿಂದ ಪೊಲೀಸರ ಕೈಗಳು ಬಲಗೊಂಡಿದ್ದು, ಡ್ರಗ್ಸ್ ಮಾಫಿಯಾ ಸಂಪೂರ್ಣ ನಿಯಂತ್ರಣಕ್ಕೆ ಬರಬೇಕಿದೆ. ಸಾಮಾಜಿಕ ಸ್ವಾಸ್ಥ್ಯ ಸ್ಥಾಪಿಸುವ ನಿಟ್ಟಿನಲ್ಲಿ ಜನಸಾಮಾನ್ಯರು ಕೂಡ ಪೊಲೀಸ್ ಇಲಾಖೆ, ಸರ್ಕಾರದ ಕ್ರಮಗಳಿಗೆ ಬೆಂಬಲವಾಗಿ ನಿಂತು, ಡ್ರಗ್ಸ್ ಮಾಫಿಯಾವನ್ನು ಬಗ್ಗು ಬಡಿಯಲು ಸಹಕರಿಸಬೇಕು.